

ಮಂಡ್ಯ: ಪ್ಲಾಸ್ಟಿಕ್ ಎಂಬ ಪೆಡಂಭೂತಕ್ಕೆ ಪ್ರತಿ ವರ್ಷ 20 ಸಾವಿರಕ್ಕೂ ಹೆಚ್ಚು ಜಾನುವಾರು, ಲಕ್ಷಾಂತರ ಜೀವಿಗಳು ಬಲಿಯಾಗುತ್ತಿವೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಫಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ಕೆ. ಗೌಡಗೆರೆ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ‘ಪ್ಲಾಸ್ಟಿಕ್ ಮುಕ್ತ ಪ್ರಪಂಚ ನಿರ್ಮಾಣ’ದಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತ ಪ್ರಬಂಧ ಸ್ಫರ್ಧೆ ವಿಜೇತರಿಗೆ ಅಭಿನಂದನೆ ಹಾಗೂ ಗಿಡ ನೆಡುವ ಕಾರ್ಯಕ್ರಮ ಮತ್ತು ಬ್ಯಾಡ್‌ಸೆಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಡೀ ವಿಶ್ವವೇ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವಂತಹ ಸಂಕಲ್ಪ ಮಾಡಬೇಕು. ಹಾಗಾದಾಗ ಮಾತ್ರ ಪ್ಲಾಸ್ಟಿಕ್‌ನ್ನು ಭೂಮಿಯಿಂದ ತೊಲಗಿಸಲು ಸಾಧ್ಯ ಎಂದು ಹೇಳಿದರು.
ರಾಷ್ಟ್ರದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರು 2022ರಲ್ಲಿ ಏಕಬಳಕೆ ಪ್ಲಾಸ್ಟಿಕ್ ಉಪಯೋಗಿಸುವಂತಿಲ್ಲ ಎಂದು ನಿರ್ಬಂಧಿಸಿದ್ದರು. ಆದರೆ ಸಿಕ್ಕಿಂ ಎಂಬ ಸಣ್ಣ ರಾಜ್ಯ 1998ರಲ್ಲೇ ಏಕಬಳಕೆ ಪ್ಲಾಸ್ಟಿಕ್ ನಿಷೇಧ ಮಾಡಿತ್ತು. ಆ ರಾಜ್ಯದ ನಾಲ್ಕೈದು ಗ್ರಾಮಗಳಲ್ಲಿ ಶೇ.100ರಷ್ಟು ಪ್ಲಾಸ್ಟಿಕ್ ಬಳಕೆ ಮಾಡುತ್ತಲೇ ಇಲ್ಲ. ಪ್ಲಾಸ್ಟಿಕ್ ಇಡೀ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರ ಜತೆಗೆ ಜಾನುವಾರುಗಳು ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಸಾಯುತ್ತಿವೆ. ಜಲಚರ ಜೀವಿಗಳು ಸಹ ಪ್ಲಾಸ್ಟಿಕ್‌ನ್ನು ತಿಂದು ಲಕ್ಷಾಂತರ ಜಲಚರ ಜೀವಿಗಳು ಸಾವನ್ನಪ್ಪಿವೆ. ಸಮುದ್ರದ ನೀರಿನ ಮೇಲೆ ತೆಲುವಂತಹ ಪ್ಲಾಸ್ಟಿಕ್ ಅನ್ನು ಮೀನುಗಳೆಂದು ಭ್ರಮಿಸಿ ತಿನ್ನುವ 5 ರಿಂದ 6 ಲಕ್ಷ ಪಕ್ಷಿಗಳು ಸಹ ಪ್ರತಿ ವರ್ಷ ಮೃತಪಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ಲಾಸ್ಟಿಕ್ ಎಷ್ಟೆಲ್ಲ ಅವಾಂತರ ಮಾಡುತ್ತಿವೆ ಎಂದರೆ ಸಾವಿರಾರು ವರ್ಷಗಳು ಹೋದರೂ ಕೊಳೆಯುವುದಿಲ್ಲ. ಮಣ್ಣು, ಗಾಳಿ, ನೀರಿನಲ್ಲೂ ಏನೂ ಮಾಡಲಾಗದು. ಬೆಂಕಿಯಲ್ಲಿ ಮಾತ್ರ ಬೇಯುತ್ತವೆ. ಆದರೆ ಇದು ಅತ್ಯಂತ ಅಪಾಯಕಾರಿ. ಇಡೀ ವಾತಾವರಣವನ್ನು ಕಲುಷಿತಗೊಳಿಸುತ್ತವೆ. 10 ರಿಂದ 15 ರೀತಿಯ ರಾಸಾಯನಿಕಗಳು ಎಲ್ಲ ಜೀವಿಗಳ ಮೇಲೂ ಹಾನಿಯುಂಟು ಮಾಡುತ್ತವೆ ಎಂದು ಎಚ್ಚರಿಸಿದ ಅವರು, ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಭೂಮಿಯಿಂದ ಹೊಡಿಸಬೇಕು. ಇಡೀ ವಿಶ್ವವನ್ನೇ ಪ್ಲಾಸ್ಟಿಕ್ ಮುಕ್ತ ಮಾಡಬೇಕು ಎಂಬುದು ನಮ್ಮ ಸಂಸ್ಥೆಯ ಸಂಕಲ್ಪ. ಹಾಗಾಗಿ ಮೊದಲು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಶಾಲಾ, ಕಾಲೇಜು ಹಂತಗಳಲ್ಲಿ ಮಾಡುತ್ತಿದ್ದೇವೆ. ಇದೇ ಕಾರಣಕ್ಕೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದೇವೆ. ಪ್ಲಾಸ್ಟಿಕ್ ಅನ್ನು ಒಳ್ಳೆಯ ಉದ್ದೇಶ ಇಟ್ಟುಕೊಂಡು ಕಂಡುಹಿಡಿಯಲಾಯಿತು. ಆದರೆ ಇಂದು ವಿಶ್ವವನ್ನೇ ಕಾಡುತ್ತಿದೆ. ಎಲ್ಲೇ ಹೋದರೂ ಪ್ಲಾಸ್ಟಿಕ್ ಎನ್ನುವಂತಾಗಿದೆ. ಭಾರತದಲ್ಲಿ ಪ್ರತಿ ವರ್ಷ 10 ಮಿಲಿಯನ್ ಟನ್ ಪ್ಲಾಸ್ಟಿಕ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ 2ನೇ ಉಪ ಪ್ರಾಂತಪಾಲ ಚಂದ್ರಶೇಖರ್ ಮಾತನಾಡಿ, ಲಯನ್ಸ್ ಸಂಸ್ಥೆಯಿಂದ ಪರಿಸರ ಸಂರಕ್ಷಣೆ, ಕ್ಯಾನ್ಸರ್ ಬಗ್ಗೆ ಜಾಗೃತಿ, ವೃದ್ದಾಶ್ರಮ, ಅನಾಥಾಶ್ರಮಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವುದು. ಶಾಲೆಗಳಿಗೆ ಬ್ಯಾಂಡ್‌ಸೆಟ್ ನೀಡುವುದು. ಪ್ಲಾಸ್ಟಿಕ್ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ ಎಂದರು.
ಅಲಯನ್ಸ್ ಸಂಸ್ಥೆಯ ವಲಯಾಧ್ಯಕ್ಷ ಎಚ್.ಜೆ.ಸುರೇಶ್, ಜಿಲ್ಲಾ ರಾಯಭಾರಿ ಅಪ್ಪಾಜಿ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್, ಎಸ್‌ಡಿಎಂಸಿ ಅಧ್ಯಕ್ಷ ಸ್ವಾಮಿ, ಶಿಕ್ಷಕರಾದ ಜಯಚಂದ್ರ, ರಾಮಕೃಷ್ಣ ಇತರರಿದ್ದರು. ಇದೇ ವೇಳೆ ಗಿಡಗಳನ್ನು ನೆಡಲಾಯಿತು. ಪ್ರಬಂಧ ಸ್ಪರ್ಧೆ ವಿಜೇತರನ್ನು ಸನ್ಮಾನಿಸಲಾಯಿತು.