ಶಾಲೆಗೆ ಮಿಯಾವಾಕಿ ವನ : ಪಿಎಂಶ್ರೀ ವಿದ್ಯಾಲಯದಲ್ಲಿ ಸಾವಿರ ಜಾತಿಯ ಗಿಡ ನಾಟಿ : ಹಸಿರು ಕ್ರಾಂತಿಗೆ ಮುನ್ನುಡಿ

vana
ವೀರಮಂಗಲದ ಪಿಎಂಶ್ರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಿಯಾವಾಕಿ ಜಪಾನ್ ಶೈಲಿಯ ವನ ನಿರ್ಮಾಣ ಕಾರ್ಯ.
Published on

ಶಶಿ ಕುತ್ಯಾಳ, ಪುತ್ತೂರು ಗ್ರಾಮಾಂತರ

ಗಿಡಗಳನ್ನು ನೆಟ್ಟು ಪೋಷಿಸುವುದರಿಂದ ಮಾತ್ರ ಪ್ರಕೃತಿಯ ಅಂದ ಕಾಣಬಹುದು, ಭೂಮಿಯ ಸಮತೋಲನ ಕಾಯ್ದುಕೊಳ್ಳಬಹುದು. ಪರಿಸರ ಸಂರಕ್ಷಣೆ ಮಾಡದಿದ್ದರೆ ಮುಂದೊಂದು ದಿನ ಮನುಷ್ಯನಿಗೆ ಮಾತ್ರವಲ್ಲದೆ ಪ್ರಾಣಿ ಸಂಕುಲಕ್ಕೆ ಆಪತ್ತು ಒದಗಿಬರಬಹುದು....ಇದು ಸಾಮಾನ್ಯವಾಗಿ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾಡುವ ಪಾಠ. ಆದರೆ ಪುತ್ತೂರು ತಾಲೂಕಿನ ವೀರಮಂಗಲದ ಪಿಎಂಶ್ರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದಕ್ಕಿಂತ ಭಿನ್ನವಾದ ಹಸಿರು ಕ್ರಾಂತಿಯ ಕಾರ್ಯವೊಂದು ನಡೆದಿದೆ.

ಪಿಎಂಶ್ರೀ ವೀರಮಂಗಲ ಶಾಲೆ ಭಾನುವಾರ ಹಸಿರು ಶಾಲೆಯಾದ ದಿನ ಎಂದರೆ ತಪ್ಪಾಗಲಾರದು. ಮಿಯಾವಾಕಿ ಜಪಾನ್ ಶೈಲಿಯ ‘ಶಾಲೆಗೊಂದು ವನ’ ಶಾಲೆಯಲ್ಲಿ ನಿರ್ಮಾಣಗೊಂಡಿದೆ. ಸಾವಿರ ಗಿಡಗಳ ನೆಡುತೋಪು ಶಾಲಾ ವಠಾರದಲ್ಲಿ ಸೃಷ್ಟಿಯಾಗಿದೆ. ನೂರಾರು ಮಂದಿ ಈ ಕಾರ್ಯದಲ್ಲಿ ಕೈಜೋಡಿಸಿ ಶಾಲೆಯ ಪರಿಸರಕ್ಕೆ ಹಸಿರು ತೋರಣದ ಓರಣ ನಿರ್ಮಿಸಿದ್ದಾರೆ. ಶಾಲೆಯ ಮುಖ್ಯಶಿಕ್ಷಕ ತಾರಾನಾಥ ಸವಣೂರು ಅವರ ವಿಶೇಷ ಮುತುವರ್ಜಿಯಲ್ಲಿ ಶಾಲಾ ವನ ನಿರ್ಮಾಣ ಕಾರ್ಯ ನಡೆದಿದೆ. ಶಿಕ್ಷಕರಲ್ಲಿ ಸಾಮಾಜಿಕ ಕಳಕಳಿಯ ಚಿಂತನೆ, ದೂರದೃಷ್ಟಿ ಯೋಚನೆ-ಯೋಜನೆಯೊಂದಿಗೆ ಇಚ್ಚಾಸಕ್ತಿ ಇದ್ದರೆ ಇಂಥದ್ದೊಂದು ಕಾರ್ಯ ಮಾಡಲು ಸಾಧ್ಯ ಎಂಬುದನ್ನು ಅವರು ತೋರಿಸಿದ್ದಾರೆ.

ಶಾಲೆಗೆ ಸೇರಿದ ಸುಮಾರು 2 ಎಕರೆಯಷ್ಟು ಜಾಗದಲ್ಲಿ ಬಳಕೆ ಇಲ್ಲದ ಭೂಮಿಯಲ್ಲಿ ಜೆಸಿಬಿ ಮೂಲಕ ಸಾಲು ಸಾಲಾಗಿ ಕಣಿ (ಕ್ರೆಂಚ್) ಮಾಡಿ, 4 ಅಡಿಗೊಂದು ಗಿಡದಂತೆ ವಿವಿಧ ಜಾತಿಯ ಹಣ್ಣಿನ ಗಿಡಗಳು ಮತ್ತು ಇತರ ಜಾತಿಯ ಸಸಿಗಳು ಸೇರಿದಂತೆ 1 ಸಾವಿರಕ್ಕೂ ಮಿಕ್ಕಿದ ಗಿಡಗಳನ್ನು ನಡೆಲಾಯಿತು. ನೆಟ್ಟ ಗಿಡಗಳಿಗೆ ಗೂಟ ಹಾಕಿ ಕಟ್ಟಲಾಯಿತು. ಶಾಲಾಭಿವೃದ್ಧಿ ಸಮಿತಿಯವರು, ವಿದ್ಯಾರ್ಥಿಗಳ ಪಾಲಕರು, ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿಕೊಂಡು ಗಿಡಗಳನ್ನು ನೆಟ್ಟರು. 250ಕ್ಕೂ ಅಧಿಕ ಮಂದಿ ನಾಗರಿಕರು ಸೇರಿಕೊಂಡು ವನ ನಿರ್ಮಿಸುವ ಮೂಲಕ ಶಾಲೆಯ ಇತಿಹಾಸಕ್ಕೆ ‘ಹಸಿರು ಪರ್ಣ’ ದ ಜೋಡಣೆ ಮಾಡಿದರು.

ಶಾಲೆಯ ಕ್ರೀಡಾಂಗಣದ ಸುತ್ತ 200 ಗಿಡಗಳನ್ನು ನೆಡಲಾಯಿತು. ಉಳಿದ ಭಾಗದಲ್ಲಿ ಸ್ಟೆಪ್ ಮಾದರಿಯಲ್ಲಿ ಏಳು ಕಣಿ (ಕ್ರೆಂಚ್) ಸಾಲುಗಳನ್ನು ನಿರ್ಮಿಸಿ ಸಸಿಗಳನ್ನು ನೆಡಲಾಯಿತು. ಜಂಬು ನೇರಳೆ, ಪೇರಳೆ, ನೇರಳೆ, ರಂಬೂಟನ್, ಮಾವು, ಚಿಕ್ಕು, ಹಲಸು, ನೆಲ್ಲಿ ಸೇರಿದಂತೆ ನೂರಾರು ಜಾತಿಯ ಹಣ್ಣಿನ ಗಿಡಗಳನ್ನು ಹಾಗೂ ಶ್ರೀಗಂಧ, ಕಕ್ಕೆ ಸಾಗುವಾನಿ. ಮಾಗುವನಿ, ಹುಳಿ ಮೊದಲಾದ ಜಾತಿಯ ಮರಗಳನ್ನು ನೆಡಲಾಯಿತು. ಮಳೆಯನ್ನು ಲೆಕ್ಕಿಸದೆ ಗಿಡಗಳನ್ನು ನೆಡುವ ಕಾರ್ಯ ದಿನಪೂರ್ತಿ ನಡೆಯಿತು. ಹಲವಾರು ಮಂದಿ ಮಹಿಳೆಯರು ಈ ಕಾರ್ಯಕ್ಕೆ ಸಾಥ್ ನೀಡಿದರು.

ಮಿಯಾವಾಕಿ ಜಪಾನ್ ಕ್ರಮದಲ್ಲಿ ಶಾಲೆಗೊಂದು ವನ ಎಂಬ ವಿಶೇಷ ಕಲ್ಪನೆಯಲ್ಲಿ ಮಂಗಳೂರಿನ ವನ ಚಾರಿಟೆಬಲ್ ಟ್ರಸ್ಟ್‌ನ ಕಾರ್ಯದರ್ಶಿ ಜೀತ್ ಮಿಲನ್ ರೋಚ್ ಅವರ ನಿರ್ದೇಶನದಲ್ಲಿ ಮತ್ತು ಮಹೇಶ್ ಕುಂಜೂರು ಪಂಜ ಅವರ ಸಂಯೋಜನೆಯಲ್ಲಿ ಶಾಲೆಯ ವಠಾರದಲ್ಲಿ ಸಾವಿರ ಗಿಡಗಳನ್ನು ನೆಡುವ ಕಾರ್ಯ ನಡೆದಿದೆ. ಶಾಲಾಭಿವೃದ್ಧಿ ಸಮಿತಿ, ಊರ ಮಂದಿ, ಪಾಲಕರು, ಹಳೇ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಸುಮಾರು 250ಕ್ಕಿಂತಲೂ ಹೆಚ್ಚಿನ ನಾಗರಿಕರು ಬಂದು ಏಕಕಾಲದಲ್ಲಿ ಶಾಲೆಗೊಂದು ವನ ನಿರ್ಮಾಣ ಮಾಡಿದ್ದಾರೆ. ಶಾಲಾ ವನದ ಸಂಪೂರ್ಣ ಖರ್ಚು ವೆಚ್ಚ ಮತ್ತು ಗಿಡಗಳ ಉಸ್ತುವಾರಿಯನ್ನು ವನ ಚಾರಿಟೆಬಲ್ ಟ್ರಸ್ಟ್ ವಹಿಸಿಕೊಂಡಿದೆ. - ತಾರಾನಾಥ ಸವಣೂರು, ಶಾಲೆಯ ಮುಖ್ಯಶಿಕ್ಷಕ ವನ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಈ ವರ್ಷ 10 ಶಾಲೆಗಳಲ್ಲಿ ಮಿಯಾವಾಕಿ ಜಪಾನ್ ಶೈಲಿಯ ‘ಶಾಲೆಗೊಂದು ವನ’ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇದು ಟ್ರಸ್ಟ್ ವತಿಯಿಂದ ನಿರ್ಮಾಣ ಮಾಡಲಾದ 2ನೇ ವನವಾಗಿದೆ. ಶಾಲೆಗಳ ಕಡೆಯಿಂದ ಸಹಕಾರ ಸಿಕ್ಕ ಕಡೆಗಳಲ್ಲಿ ಟ್ರಸ್ಟ್ ಖರ್ಚು-ವೆಚ್ಚದಲ್ಲಿ ವನ ನಿರ್ಮಾಣ ಮಾಡಲಾಗುತ್ತಿದ್ದು, ಈ ಶಾಲೆಯ ಮುಖ್ಯಶಿಕ್ಷಕರ ಸಂಪೂರ್ಣ ಸಹಕಾರ ಸಿಕ್ಕಿದೆ. ಶಾಲೆಯ ಸಹಭಾಗಿತ್ವದಲ್ಲಿ ಎರಡು ವರ್ಷಗಳ ಕಾಲ ಗಿಡಗಳ ಷೋಷಣೆಯ ಕಾರ್ಯವನ್ನೂ ಟ್ರಸ್ಟ್ ಮಾಡಲಿದೆ. - ಜೀತ್ ಮಿಲನ್ ರೋಚ್, ವನ ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net