

ಹಾನಗಲ್ಲ: ಮಾಹಿತಿ ಕೊರತೆಯಿಂದಾಗಿ ಕೃಷಿಕರು ತೋಟಗಾರಿಕೆಯಲ್ಲಿ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಸೂಕ್ತ ಮಾಹಿತಿ, ಮಾರ್ಗದರ್ಶನದಿಂದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು. ತೋಟದ ಬೆಳೆಗಳೆಲ್ಲವೂ ಲಾಭದಾಯಕವಾಗಿವೆ ಎಂದು ತೋಟಗಾರಿಕೆ ಕೃಷಿ ತಜ್ಞ ಶಿವಮೊಗ್ಗದ ಎಂ.ಎನ್. ಗುರುನಾಥ ಹೇಳಿದರು.
ತಾಲೂಕಿನ ಕೊಪ್ಪರಸಿಕೊಪ್ಪದ ಮಹೇಶ ಹೊಂಬಳ ಅವರ ತೋಟದಲ್ಲಿ ಆಯೋಜಿಸಿದ್ದ ತೋಟಗಾರಿಕೆ ಬೆಳೆ ಪ್ರಾತ್ಯಕ್ಷಿಕೆ ಹಾಗೂ ವೈಜ್ಞಾನಿಕ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಲೆನಾಡ ಅಡಕೆ ತಳಿಗಳು ಸೇರಿದಂತೆ ಹಲವು ತೋಟಗಾರಿಕೆ ಬೆಳೆಗಳನ್ನು ಬಯಲುಸೀಮೆಯಲ್ಲೂ ಬೆಳೆಯಲಾಗುತ್ತಿದೆ. ಆದರೆ, ಈ ಬೆಳೆಗಳಿಗೆ ಬೇಕಾಗುವ ವಾತಾವರಣ, ಉಷ್ಣಾಂಶ ಹಾಗೂ ನೀರಿನ ಲಭ್ಯತೆ ಅತ್ಯಂತ ಮುಖ್ಯವಾದುದು. ಇವೆಲ್ಲ ತಿಳಿಯದೆ ಕೆಲವೊಮ್ಮೆ ರೈತರು ಹೊಸ ಬೆಳೆಗಳಿಗೆ ಮುಂದಾಗಿ ಆರ್ಥಿಕ ಸಂಕಷ್ಟ ಎದುರಿಸುವಂತಾಗುತ್ತದೆ ಎಂದರು.
ತೋಟಗಾರಿಕೆ ಬೆಳೆಗಳಲ್ಲಿ ತಳಿ ಆಯ್ಕೆ ಹಾಗೂ ನೀರು ನಿರ್ವಹಣೆ ಅತ್ಯಂತ ಮುಖ್ಯವಾಗುತ್ತದೆ. ತಂತ್ರಜ್ಞಾನ ಬಳಕೆ ಮೂಲಕ ವೈಜ್ಞಾನಿಕ ಯಂತ್ರಗಳ ಬಳಕೆ ಅನಿವಾರ್ಯವಾಗಿದೆ. ಸುಧಾರಿತ ವ್ಯವಸಾಯ ಕ್ರಮ ಅನುಸರಿಸಿದರೆ ಉತ್ತಮ ಬೆಳೆ ಹಾಗೂ ಲಾಭ ಪಡೆಯಬಹುದಾಗಿದೆ ಎಂದರು.
ನಿವೃತ್ತ ಡಿವೈಎಸ್ಪಿ, ಕೃಷಿಕ ಈರನಗೌಡ ವೀರನಗೌಡ್ರ ಮಾತನಾಡಿ, ರೈತ ಕುಟುಂಬದಿಂದ ಬಂದವರಿಗೆ ಕೃಷಿ ಕೇವಲ ಒಂದು ಉದ್ಯೋಗವಾಗಿತ್ತು. ಆದರೆ, ಈಗ ಕೃಷಿ ಉದ್ಯಮವಾಗಿ ಬೆಳೆಯುತ್ತಿದೆ. ಬದಲಾದ ಕಾಲಕ್ಕೆ ವಿಜ್ಞಾನವನ್ನು ಬಳಸಿಕೊಂಡು ಕೃಷಿಗೆ ಮುಂದಾಗಬೇಕು ಎಂದರು.
ಕೃಷಿಕರಾದ ಮಲ್ಲನಗೌಡ ವೀರನಗೌಡ್ರ, ಮಾರುತಿ ಶಿಡ್ಲಾಪುರ, ಮಹೇಶ ಹೊಂಬಳ, ಸಿದ್ದಲಿಂಗೇಶ ವಳಸಂಗದ, ಶಿವಾಜಿ ಸಾಳುಂಕೆ, ಅಶೋಕ ಸಾಳುಂಕೆ, ಪ್ರಭುಗೌಡ ಪಾಟೀಲ, ಕೆ.ಡಿ. ನಾಗೋಜಿ, ಮೃತ್ಯುಂಜಯ ಲೂತಿಮಠ, ಸುರೇಶಗೌಡ ಪಾಟೀಲ, ಕೃಷ್ಣಾ ಗಾಜಿಪುರ ಇದ್ದರು.