

ಕುಕನೂರು: ಸಮೃದ್ಧಿ ಪರಿಸರ ವಾತಾವರಣಕ್ಕೆ ಸಸ್ಯ ಸಂಪತ್ತು ಬೆಳೆಸುವ ಹೊಣೆಗಾರಿಕೆ ಪ್ರತಿಯೊಬ್ಬರು ಮಾಡಬೇಕು ಎಂದು ಯಲಬುರ್ಗಾ ಉಪವಲಯ ಅರಣ್ಯಾಧಿಕಾರಿ ಅಂದಪ್ಪ ಕುರಿ ಹೇಳಿದರು.
ಪಟ್ಟಣದ ವೀರಭದ್ರಪ್ಪ ವೃತ್ತದಲ್ಲಿ ಶುಕ್ರವಾರ ವಾರದ ತರಕಾರಿ ಸಂತೆ ದಿನ ಅರಣ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಸ್ಯ ಸಂತೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಸಸಿ ವಿತರಿಸಿ ಮಾತನಾಡಿದರು. ಉಸಿರಾಡುವ ಉಸಿರನ್ನು ಕಾಪಾಡಿಕೊಳ್ಳಬೇಕು.
ಮನುಷ್ಯನಿಗೆ ಉಸಿರು ನಿಂತರೆ ಪ್ರಾಣ ಹೋದಂತೆ. ಆಮ್ಲಜನಕ ಉತ್ಪಾದನೆ ಮಾಡುವ ಗಿಡ ಮರಗಳ ಸಂಖ್ಯೆ ಕಡಿಮೆಯಾದರೆ ಗಾಳಿ ಕಲುಷಿತಗೊಳ್ಳುತ್ತಾದೆ. ಮನಷ್ಯನ ಉಸಿರಾಟಕ್ಕೆ ಮುಂದಿನ ದಿನಮಾನಗಳಲ್ಲಿ ತೊಂದರೆ ತಪ್ಪದು.
ಕೃತಕ ಉಸಿರಾಟ ಕ್ಷಣೀಕ ಎಂದರು. ಸಾರ್ವಜನಿಕರು ಮನೆ ಅಂಗಳದಲ್ಲಿ ಹಾಗೂ ಶಿಕ್ಷಕರು, ಮಕ್ಕಳು ಶಾಲಾ ಆವರಣದಲ್ಲಿ, ರೈತರು ಬದುವಿನಲ್ಲಿ ಸಸಿ ನೆಟ್ಟು ಅರಣ್ಯ ಕೃಷಿಗೆ ಆದ್ಯತೆ ನೀಡಬೇಕು. ಗಿಡವೊಂದು ನೆರಳು, ಗೊಬ್ಬರ ಜತೆಗೆ ಭೂಮಿಯ ಫಲವತ್ತದೆ ಸಹ ಕಾಪಾಡುತ್ತದೆ.
ಫಲ ನೀಡುವ ಗಿಡ ಮರಗಳು ಬದುಕಿಗೆ ಆದಾಯ ಸಹ ನೀಡುತ್ತವೆ. ಸಸ್ಯ ಸಂಪತ್ತು ಬೆಳೆಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ಅದನ್ನು ಅರ್ಥ ಮಾಡಿಕೊಳ್ಳಬೇಕಿದೆ. ದೊಡ್ಡ ದೊಡ್ಡ ಗಿಡ ಮರಗಳು ಕಾಣುತ್ತಿಲ್ಲ.
ಎಲ್ಲೋ ಇರುವ ದೊಡ್ಡ ದೊಡ್ಡ ಮರಗಳನ್ನು ದೂರ ಹೋಗಿ ನೋಡಿಕೊಂಡು ಬರುವ ಕಾಲ ಬಂದಿದೆ. ಗಿಡಗಳನ್ನು ನೆಡುವುದು ಜತೆಗೆ ಇದ್ದ ಗಿಡಗಳನ್ನು ಕಡಿಯದೆ ಉಳಿಸಿಕೊಳ್ಳುವ ಜವಬ್ದಾರಿ ಎಲ್ಲರ ಮೇಲಿದೆ ಎಂದರು.