ಗಿಡಕ್ಕೆ ನೀರುಣಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

12
ಅಥಣಿ ತಹಸೀಲ್ದಾರ್ ಕಚೇರಿ ಆವರಣದಲ್ಲಿರುವ ಗಿಡಗಳಿಗೆ ನೀರುಣಿಸಿ ಪ್ರತಿಭಟಿಸಿದ ಉಪನ್ಯಾಸಕರು. ಭರತ ಪಾಟೀಲ, ಎಸ್.ಎಸ್.ದೇವರೆಡ್ಡಿ, ಎನ್.ಎಸ್.ಚಿಕ್ಕಟ್ಟಿ, ಪಿ.ಎಲ್.ಪೂಜಾರಿ, ಎಂ.ಎಸ್.ಉಕ್ಕಲಿ, ಎಸ್.ಪಿ.ತಳಕೇರಿ ಇದ್ದರು.
Published on

ಅಥಣಿ: ಸೇವೆ ಕಾಯಂಗೆ ಆಗ್ರಹಿಸಿ ನ.23ರಿಂದ ತರಗತಿಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಸೋಮವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿರುವ ಗಿಡಗಳಿಗೆ ನೀರುಣಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.

ಅತಿಥಿ ಉಪನ್ಯಾಸಕ ಭರತ ಪಾಟೀಲ ಮಾತನಾಡಿ, ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿರುವ ಹುದ್ದೆಗಳಿಗೆ ವೃಂದ ಮತ್ತು ನೇಮಕಾತಿಗೆ ತಿದ್ದುಪಡಿ ತಂದು ಅನುಮೋದನೆ ನೀಡಿ, ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಸೃಜಿಸಿದ ಹುದ್ದೆಗಳಲ್ಲಿ ವಿಲೀನಗೊಳಿಸಿ ಕಾಯಂಗೊಳಿಸುವಂತೆ ಒತ್ತಾಯಿಸಿದರು.

ನ.23ರಿಂದ ಅಥಣಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಸರ್ಕಾರದಿಂದ ಲಿಖಿತ ಆದೇಶ ಬರುವವರೆಗೆ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರ ಹೋರಾಟ ಮುಂದುವರಿಯಲಿದೆ ಎಂದರು.

ಎಸ್.ಎಸ್.ದೇವರೆಡ್ಡಿ ಮಾತನಾಡಿ, ರಾಜ್ಯದ 430 ಸರ್ಕಾರಿ ಪದವಿ ಕಾಲೇಜುಗಳಲ್ಲಿ 11 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಡಿಮೆ ಗೌರವಧನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಎನ್.ಎಸ್.ಚಿಕ್ಕಟ್ಟಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಭರವಸೆ ಈಡೇರಿಸಬೇಕು ಎಂದು ಒತ್ತಾಯಿಸಿದರು. ಉಪನ್ಯಾಸಕರಾದ ಪಿ.ಎಲ್.ಪೂಜಾರಿ, ಎಂ.ಎಸ್.ಉಕ್ಕಲಿ, ಎಸ್.ಪಿ.ತಳಕೇರಿ, ಎಸ್.ಬಿ.ಜಾಧವ, ಭಾರತಿ ಪಾಟೀಲ, ವಿದ್ಯಾವತಿ ಬಡಿಗೇರ, ಎಸ್.ಆರ್.ಗಡದೆ, ವಿಜಯ ಕಾಂಬಳೆ, ಎ.ವಿ.ಕುರಣಿ, ರೂಪಾ ಗಸ್ತಿ, ಎನ್.ಎಸ್.ನೂಲಿ, ಎಸ್.ಎಂ.ಹಾದಿಮನಿ, ಬಿ.ಕೆ.ಪಾಟೀಲ, ಕೆ.ಎಸ್.ಬಿಜ್ಜರಗಿ, ಸಂಜಯ ಕಾಂಬಳೆ, ಸುನಂದಾ ಹಿಪ್ಪರಗಿ, ಎ.ಆರ್.ಕಣಬೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net