

ಪುತ್ತೂರು ಗ್ರಾಮಾಂತರ: ಸಾಮಾಜಿಕ ಅರಣ್ಯ ಇಲಾಖೆಯವರು ರಸ್ತೆ ಬದಿಯಲ್ಲಿ, ಅದರಲ್ಲೂ ವಿದ್ಯುತ್ ತಂತಿ ಹಾದು ಹೋಗುವ ಜಾಗದ ಅಡಿ ಭಾಗದಲ್ಲೇ ಗಿಡಗಳನ್ನು ನೆಡುತ್ತಿದ್ದಾರೆ. ಶೇಖಮಲೆ-ಅರಿಯಡ್ಕ-ದೇರ್ಲ ಜಿಲ್ಲಾ ಪಂಚಾಯಿತಿ ರಸ್ತೆ ಬದಿಯಲ್ಲಿ ವಿದ್ಯುತ್ ತಂತಿ ಹಾದು ಹೋಗುವ ಅಡಿ ಭಾಗದಲ್ಲೇ ಗಿಡಗಳನ್ನು ನೆಡಲಾಗಿದೆ. ಈ ರೀತಿಯಾಗಿ ಗಿಡ ನೆಡುವುದರಿಂದ ಮುಂದೆ ಗಿಡ ಬೆಳೆದು ಮರವಾದಾಗ ಅಪಾಯಗಳಾಗುವ ಸಂಭವವಿದೆ ಎಂದು ಗ್ರಾಮಸ್ಥರು ಕೆಯ್ಯೂರು ಗ್ರಾಮ ಸಭೆಯಲ್ಲಿ ಇಲಾಖೆಯ ಕಾರ್ಯಕ್ಕೆ ಅತೃಪ್ತಿ ವ್ಯಕ್ತಪಡಿಸಿದರು.
ಕೆಯ್ಯೂರು ಗ್ರಾ.ಪಂ.ಸಭೆ ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಅಧ್ಯಕ್ಷತೆಯಲ್ಲಿ ತಾಪಂ ನರೇಗಾ ಸಹಾಯಕ ನಿರ್ದೇಶಕಿ ಶೈಲಜಾ ಭಟ್ ಮಾರ್ಗದರ್ಶನದಲ್ಲಿ ಕೆಯ್ಯೂರು ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ಶಿವಶ್ರೀರಂಜನ್ ರೈ ದೇರ್ಲ ವಿಷಯ ಪ್ರಸ್ತಾಪಿಸಿ ಬೇಕಾದಷ್ಟು ಅರಣ್ಯ ಪ್ರದೇಶವಿದ್ದರೂ ಸಾಮಾಜಿಕ ಅರಣ್ಯ ಇಲಾಖೆಯವರು ರಸ್ತೆ ಬದಿಯಲ್ಲೇ, ಅದರಲ್ಲೂ ವಿದ್ಯುತ್ ತಂತಿ ಹಾದು ಹೋಗುವ ಕೆಳಭಾಗದಲ್ಲಿ ಗಿಡ ನೆಟ್ಟಿದ್ದಾರೆ ಎಂದರು.
ಕೆಯ್ಯೂರು- ಕಣಿಯಾರು- ಕೌಡಿಚ್ಚಾರು ರಸ್ತೆಯ ಬದಿಯಲ್ಲಿ ಅಪಾಯಕಾರಿ ಮರಗಳಿದ್ದು ಇವುಗಳನ್ನು ಕೂಡಲೇ ತೆರವುಗೊಳಿಸುವಂತೆ ಗ್ರಾ.ಪಂ. ಸದಸ್ಯ ಜಯಂತ ಪೂಜಾರಿ ಕೆಂಗುಡೇಲು ಆಗ್ರಹಿಸಿದರು. ಎಟ್ಯಡ್ಕ, ಇಳಂತಾಜೆ ರಸ್ತೆಯಲ್ಲಿಯೂ ಅಪಾಯಕಾರಿ ಸ್ಥಿತಿಯಲ್ಲಿ ಅಕೇಶಿಯಾ ಮರಗಳಿದ್ದು, ಅವುಗಳನ್ನೂ ತೆರವುಗೊಳಿಸಿ ಎಂದು ಸದಸ್ಯ ಬಟ್ಯಪ್ಪ ರೈ ದೇರ್ಲ ಒತ್ತಾಯಿಸಿದರು.
ಮಾಡಾವು ಸಂಪಾಜೆ ಪ್ರದೇಶದಲ್ಲಿ ಎಚ್.ಟಿ.ವಿದ್ಯುತ್ ಲೈನ್ ತಂತಿಗಳು ತೀರಾ ಹಳೆಯದ್ದಾಗಿವೆ. ಇದನ್ನು ಬದಲಾಯಿಸಬೇಕು ಈಗಾಗಲೇ ಮನವಿ ಮಾಡಿಕೊಂಡಿದ್ದೇವೆ ಎಂದು ವಿಷ್ಣು ಗೌಡ ತಿಳಿಸಿದರು. ಕಟ್ಟತ್ತಾರು- ಕೈತಡ್ಕ ರಸ್ತೆಯಲ್ಲಿ ಅಪಾಯಕಾರಿ ವಿದ್ಯುತ್ ಕಂಬಗಳು ಹಾಗೂ ಹಳೆಯ ತಂತಿಗಳಿವೆ, ಇದನ್ನು ಬದಲಾಯಿಸಬೇಕು ಎಂದು ಪ್ರಮೀತ್‌ರಾಜ್ ಕಟ್ಟತ್ತಾರು ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಇಲಾಖೆಯ ಜೆಇ ರವೀಂದ್ರ ಅವರು ಪರಿಶೀಲನೆ ಮಾಡಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ ಅವರು ವರದಿ ಮಂಡಿಸಿದರು. ಗ್ರಾಪಂ ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ, ಸದಸ್ಯರಾದ ಶೇಷಪ್ಪ ದೇರ್ಲ, ತಾರಾನಾಥ ಕಂಪ, ವಿಜಯ ಕುಮಾರ್ ಸಣಂಗಳ, ಜಯಂತಿ ಎಸ್.ಭಂಡಾರಿ, ಗಿರಿಜಾ ಕಣಿಯಾರು, ಮೀನಾಕ್ಷಿ ವಿ.ರೈ, ನೆಬಿಸಾ, ಮಮತಾ ರೈ ಉಪಸ್ಥಿತರಿದ್ದರು. ಪಂಚಾಯಿತಿ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿ, ವಂದಿಸಿದರು.
ತೆಗ್ಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಾಡು ಕುಸಿಯುವ ಹಂತದಲ್ಲಿದೆ. ರೀಪುಗಳು ತುಂಡಾಗಿದ್ದು ಹಂಚುಗಳು ಬೀಳುತ್ತಿವೆ. ಈ ಬಗ್ಗೆ ಶಿಕ್ಷಣ ಇಲಾಖೆ ಗಮನಹರಿಸಬೇಕಾಗಿದೆ ಎಂದು ಮೋಹನ್ ಗೌಡ ಎರಕ್ಕಳ ಆಗ್ರಹಿಸಿದರು. ಈ ಕುರಿತು ಅಲ್ಲಿನ ಮುಖ್ಯಶಿಕ್ಷಕಿ ಈಗಾಗಲೇ ಮಾಹಿತಿ ನೀಡಿದ್ದಾರೆ. ಮಕ್ಕಳನ್ನು ಆ ಕಟ್ಟಡದಿಂದ ತೆರವು ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಸಿಆರ್‌ಪಿ ಶಶಿಕಲಾ ತಿಳಿಸಿದರು. ಶಾಲಾ ಕಟ್ಟಡ ಬೀಳುತ್ತಿರುವ ಬಗ್ಗೆ ಇಲಾಖೆಗೆ ಹಲವು ಸಲ ಮನವಿ ಮಾಡಿಕೊಂಡರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಸದಸ್ಯ ಅಬ್ದುಲ್ ಖಾದರ್ ಮೇರ್ಲ ದೂರಿದರು.
ಜನೌಷಧ ಕೇಂದ್ರ ಪ್ರತಿ ಗ್ರಾಮಕ್ಕೆ ಒಂದರಂತೆ ಇದ್ದರೆ ಜನರಿಗೆ ತುಂಬಾ ಪ್ರಯೋಜನವಾಗುತ್ತದೆ. ಹಾಗಾಗಿ ಈ ಕುರಿತು ಸರ್ಕಾರಕ್ಕೆ ಬರೆದುಕೊಳ್ಳಬೇಕು ಎಂದು ಶಿವಶ್ರೀರಂಜನ್ ರೈ ದೇರ್ಲ ಹೇಳಿದರು. ಇದಕ್ಕೆ ಗ್ರಾಮಸ್ಥರು ಧ್ವನಿಗೂಡಿಸಿದರು. ಈ ಬಗ್ಗೆ ಆರೋಗ್ಯ ಇಲಾಖೆಗೆ ಬರೆದುಕೊಳ್ಳುವುದೆಂದು ನಿರ್ಣಯಿಸಲಾಯಿತು. ಕೆಯ್ಯೂರು ಗ್ರಾಮದ ನೂಜಿ, ಮೇರ್ಲ, ಸಣಂಗಳ ಈ ಭಾಗದಲ್ಲಿ ಎಲ್ಲಿಯೂ ಅಂಗನವಾಡಿ ಕೇಂದ್ರವಿಲ್ಲದೆ ಮಕ್ಕಳಿಗೆ ತೊಂದರೆಯಾಗಿದೆ. ಹಾಗಾಗಿ ಈ ಭಾಗಕ್ಕೆ ಅಂಗನವಾಡಿ ಕೇಂದ್ರದ ಅವಶ್ಯಕತೆ ಇದೆ ಎಂದು ಸದಸ್ಯ ಅಬ್ದುಲ್ ಖಾದರ್ ಮೇರ್ಲ ತಿಳಿಸಿದರು.