

ಕೂಡ್ಲಿಗಿ: ವೇಗವಾಗಿ ಬೆಳೆಯುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ನಾವು ಪರಿಸರದಿಂದ ದೂರವಾಗುತ್ತಿದ್ದೇವೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಮೇಲ್ವಿಚಾರಕ ಮಹಾಲಿಂಗಯ್ಯ ಹೇಳಿದರು.
ಇದನ್ನೂ ಓದಿ:ಮನೆ ಮನೆಗೆ ತೆರಳಿ ಆರೋಗ್ಯ ಜಾಗೃತಿ ಕಾರ್ಯಕ್ರಮ
ತಾಲೂಕಿನ ರಾಮಸಾಗರಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶನಿವಾರ ಹಮ್ಮಿಕೊಂಡಿದ್ದ ಪರಿಸರ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಲವು ವರ್ಷಗಳ ಹಿಂದೆ ಮಕ್ಕಳು ಪರಿಸರದೊಂದಿಗೆ ಬೆಳೆಯುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಮಕ್ಕಳು ತಂತ್ರಜ್ಞಾನದ ಜತೆ ದೊಡ್ಡವರಾಗುತ್ತಿದ್ದಾರೆ. ಬದಲಾಗುತ್ತಿರುವ ಮಾನವನ ಜೀವನ ಶೈಲಿ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಎಲ್ಲರೂ ಪರಿಸರ ಸ್ನೇಹಿಯಾಗಿ ಬೆಳೆಯಬೇಕು. ಗ್ರಾಮಾಭಿವೃದ್ಧಿ ಯೋಜನೆಯಡಿ ತಾಲೂಕಿನಲ್ಲಿ ಕೆರೆ ದಂಡೆಮೇಲೆ, ಕಾಡಿನಲ್ಲಿ ಹಣ್ಣಿನ ಹಾಗೂ ವಿವಿಧ ಗಿಡಗಳನ್ನು ನಾಟಿ ಮಾಡಲಾಗುತ್ತಿದೆ. ಜನ್ಮದಿನ ನೆಪದಲ್ಲಿ ದುಂದು ವೆಚ್ಚ ಮಾಡುವ ಬದಲು ಗಿಡ ನೆಟ್ಟು ಪರಿಸರ ಪ್ರೇಮಿಯಾಗಬೇಕು ಎಂದರು.
ಮುಖ್ಯಶಿಕ್ಷಕ ವೈ.ಎಂ.ಈಶಪ್ಪ ಮಾತನಾಡಿ, ಆರೋಗ್ಯ, ಶಿಕ್ಷಣ ಹಾಗೂ ಪರಿಸರ ಸಮತೋಲನವಾಗಿದ್ದರೆ ಯಾವುದೇ ಸಮಸ್ಯೆಗಳಿಲ್ಲದೆ ಜೀವಿಸಬಹುದು. ಇತ್ತೀಚೆಗೆ ಪ್ಲ್ಯಾಸ್ಟಿಕ್ ಬಳಕೆ ಹೆಚ್ಚುತ್ತಿದ್ದು, ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಪ್ಲ್ಯಾಸ್ಟಿಕ್ ಮುಕ್ತ ಸಮಾಜ ನಿರ್ಮಿಸಬೇಕು ಎಂದರು. ಶಿಕ್ಷಕರಾದ ಮಾರೇಶ್, ಸಿದ್ದೇಶ, ಸೇವಾ ಪ್ರತಿನಿಧಿ ನಾಗೇಶ ಇತರರಿದ್ದರು.