ಇಳುವರಿ ಹೆಚ್ಚಿಸಿಕೊಳ್ಳಲು ಸಸ್ಯಮೂಲ ಸಂವರ್ಧನೆ ಅಗತ್ಯ

mdg 1 (6)
Published on

ಮೂಡಿಗೆರೆ: ಅತಿವೃಷ್ಟಿಯಿಂದ ಹವಾಮಾನದಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಿ ಮಣ್ಣಿನ ತೇವಾಂಶ ಹಾಗೂ ಫಲವತ್ತತೆಯಲ್ಲಿ ಏರುಪೇರಾಗುತ್ತಿರುವುದರಿಂದ ಕಾಫಿ ಬೆಳೆಯಲ್ಲಿ ಇಳುವರಿ ಕಡಿಮೆಯಾಗುತ್ತಿದೆ. ಅದನ್ನು ಸರಿದೂಗಿಸಲು ವಿಜ್ಞಾನಿಗಳ ಸಲಹೆ ಪಡೆದುಕೊಳ್ಳಬೇಕು ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಹೇಳಿದರು.

ಕಾಫಿ ಬೆಳೆಗಾರರ ಒಕ್ಕೂಟ, ಕೃಷಿಕ ಸಮಾಜ ಮತ್ತು ಕೆವಿಕೆಯಿಂದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಕಾಫಿ ಬೆಳೆಯಲ್ಲಿ ಸಸ್ಯಮೂಲ ಸಂವರ್ಧನೆ ಪ್ರಾತ್ಯಕ್ಷಿಕೆ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಕಾಫಿ ಬೆಳೆಯಲ್ಲಿ ತಂತ್ರಜ್ಞಾನ ಬಳಸಿಕೊಳ್ಳುವುದರಿಂದ ಗುಣಮಟ್ಟದ ಫಸಲು ಪಡೆಯಲು ಸಹಕಾರಿಯಾಗುತ್ತದೆ. ಆದರೆ ಬೆಳೆಗಾರರು ಬೆಳೆಯಲ್ಲಿ ಸಾಂಪ್ರದಾಯಿಕ ಪದ್ಧತಿಯನ್ನು ಮುಂದುವರೆಸಿದ್ದಾರೆ. ಗಿಡವನ್ನು ಕಸಿ ಕಟ್ಟುವ ಮೂಲಕ ವಿನೂತನ ಪದ್ಧತಿ ಅಳವಡಿಸಿಕೊಂಡರೆ ಹೆಚ್ಚು ಇಳುವರಿ ಜತೆಗೆ ಗುಣಮಟ್ಟದ ಕಾಫಿ ಪಡೆಯಲು ಸಾಧ್ಯ ಎಂಬುವುದನ್ನು ಕೃಷಿ ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ. ಹೊಸ ತಂತ್ರಜ್ಞಾನವನ್ನು ಕಾಫಿ ಬೆಳೆಯಲ್ಲಿ ಬೆಳೆಗಾರರು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾಕ್ಟರ್ ಎ.ಟಿ.ಕೃಷ್ಣಮೂರ್ತಿ ಮಾತನಾಡಿ, ಕಾಫಿ ಬೆಳೆಯಲ್ಲಿ ಸಸ್ಯಮೂಲ ಸಂವರ್ಧನೆ ಮಾಡಿಕೊಳ್ಳುವುದರಿಂದ ಗುಣಮಟ್ಟದೊಂದಿಗೆ ಉತ್ತಮ ಇಳುವರಿ ಪಡೆಯಬಹುದು. ಸಸ್ಯಮೂಲ ಸಂವರ್ಧನೆಯನ್ನು ಬೆಳೆಗಾರರು ಸುಲಭ ವಿಧಾನದಲ್ಲಿ ಮಾಡಿಕೊಳ್ಳಬಹುದು. ಎಲ್ಲ ರೈತರು ಇದನ್ನು ತಮ್ಮ ತೋಟದ ಕಾಫಿ ಬೆಳೆಯಲ್ಲಿ ಅಳವಡಿಸಿಕೊಳ್ಳಬಹುದು ಇದರ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೂ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಶ್ರೀನಿವಾಸ್, ಕೆಜಿಎಫ್ ಅಧ್ಯಕ್ಷ ಹೆಚ್.ಬಿ.ಶಿವಣ್ಣ, ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಕಾಫಿ ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಪೂರ್ಣೇಶ್ ಜಿ. ಹೊಸಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net