

ಹಗರೆ: ಆಲೂಗಡ್ಡೆ ಬೆಳೆಗಾರರನ್ನು ಉತ್ತೇಜಿಸಲು ಹೊಸದಾಗಿ ಸಂಶೋಧಿಸಿದ ಸಸಿ ತಳಿ ಹಾಗೂ ಕುಡಿ ಸಸಿಗಳ ಉತ್ಪಾದನೆ ಕುರಿತು ಮಾಹಿತಿ ನೀಡಲು ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಯತೀಶ್ ತಿಳಿಸಿದರು.
ಸಮೀಪದ ಕೋಮಾರನಹಳ್ಳಿ ಗ್ರಾಮದ ಪ್ರಗತಿಪರ ರೈತ ನಾಗರಾಜು ಎಂಬುವರ ಜಮೀನಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ ಆಲೂಗಡ್ಡೆ ಬೆಳೆಯಲ್ಲಿ ಕುಡಿ ಕಾಂಡ ಸಸಿಗಳಿಂದ ಉತ್ಪಾದನೆ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಯೆಟ್ನಾಂನಂತಹ ಸಣ್ಣ ದೇಶದಿಂದ ತಾಯಿ ಸಸಿಯನ್ನು 2019ರಲ್ಲಿ ತಂದು ಸಂಶೋಧನೆ ನಡೆಸಿ ನರ್ಸರಿಗಳ ಮೂಲಕ ರೈತರಿಗೆ ಕೊಡಲಾಗಿತ್ತು. ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದ ಆಲೂಗಡ್ಡೆ ಇದೀಗ ರೋಗಬಾಧೆಯಿಂದ ಮೂರ್ನಾಲ್ಕು ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಇಳಿಮುಖವಾಗಿದೆ. ಆದ್ದರಿಂದ ರೈತರು ಈ ಆಲೂಗಡ್ಡೆ ಸಸಿ ನೆಟ್ಟು ಬೀಜೋತ್ಪನ್ನ ಮಾಡಿ ಉತ್ತಮ ಇಳುವರಿ ಪಡೆಯಬೇಕು ಎಂದು ಸಲಹೆ ನೀಡಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಪ್ರಸನ್ನ ಮಾತನಾಡಿ, ಒಂದು ಎಕರೆಯಲ್ಲಿ ಇಪ್ಪತೈದರಿಂದ ಮೂವತ್ತು ಸಾವಿರ ಸಸಿ ನೆಡಬೇಕಾಗುತ್ತದೆ. ಒಂದು ಸಸಿಯಿಂದ ಮತ್ತೊಂದು ಸಸಿಗೆ ಎಂಟು ಇಂಚು ಅಂತರ ಹಾಗೂ ಒಂದು ಸಾಲಿನಿಂದ ಇನ್ನೊಂದಕ್ಕೆ ಎರಡು ಅಡಿ ಅಂತರ ಇರಬೇಕು ಎಂದರು.
ಪ್ರಗತಿಪರ ರೈತ ನಾಗರಾಜು ಮತ್ತು ಗಂಗಾಧರ್ ಮಾತನಾಡಿದರು. ಸವಾಸಿಹಳ್ಳಿ ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ, ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ.ಪಿ.ಕುಮಾರ್, ಹಗರೆ ಬಿಜೆಪಿ ಮುಖಂಡ ಡಿಶಾಂತಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಪುಟ್ಟು, ರೈತ ಮುಖಂಡ ಮಲ್ಲಿಕಾರ್ಜುನ ಇತರರಿದ್ದರು.