

ಚಿಕ್ಕಮಗಳೂರು: ಪರಿಸರ ಮಾಲಿನ್ಯ ಉಂಟಾದರೆ ಮುಂಬರುವ ದಿನಗಳಲ್ಲಿ ಪ್ರಕೃತಿದತ್ತವಾಗಿ ಸಿಗುತ್ತಿರುವ ಆಮ್ಲ ಜನಕವನ್ನೂ ಕೊಂಡುಕೊಳ್ಳುವ ಪರಿಸ್ಥಿತಿ ಎದುರಾಗಲಿದೆ ಎಂದು ಜಿಲ್ಲಾ ಮಾಲಿನ್ಯ ನಿಯಂತ್ರಣಾಕಾರಿ ವೈ.ಎಸ್.ರಾಧಾ ಹೇಳಿದರು.
ನಗರದ ಬೈಪಾಸ್ ಸಮೀಪ ಎಂಇಎಸ್ ಎಸ್‌ಎಸ್‌ಆರ್ ಪ್ರಾಯೋಗಿಕ ಪ್ರೌಢಶಾಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ ಹಾಗೂ ಜಿಲ್ಲಾ ವಿಜ್ಞಾನ ಪರಿಷತ್ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚಿದ ಜನಸಂಖ್ಯೆಯಿಂದ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅಪಾರ ಪರಿಸರ ನಾಶ ಮಾಡಲಾಗುತ್ತಿದೆ. ಇದರಿಂದ ಉತ್ತಮ ಆಮ್ಲಜನಕ ಸಿಗುತ್ತಿಲ್ಲ. ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದರು.
ವಿದ್ಯಾರ್ಥಿಗಳು ಭೂಮಿ ಉಳಿಸಿಕೊಳ್ಳಬೇಕಾದರೆ ಸಾಧ್ಯವಾದಷ್ಟು ಗಿಡಗಳನ್ನು ನೆಡಬೇಕು. ನಿಮ್ಮ ಎಲ್ಲ ಆಚರಣೆಗಳಿಗೆ ಉಡುಗೊರೆಯಾಗಿ ಗಿಡಗಳನ್ನು ಕೊಡಿ ಮತ್ತು ಮನೆಯಂಗಳದಿ ಸಸಿ ನೆಡುವ ಮೂಲಕ ಪೋಷಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ವಿಜ್ಞಾನ ಪರಿಷತ್ ಅಧ್ಯಕ್ಷ ಸತ್ಯನಾರಾಯಣ್ ಪ್ರಾಸ್ತಾವಿಕಾಗಿ ಮಾತನಾಡಿ, ಪರಿಸರ ಕಾಳಜಿ ಇದ್ದರೆ ಮಾತ್ರ ಪರಿಸರವನ್ನು ವನದಲ್ಲಿ ಕಾಣಲು ಸಾಧ್ಯ. ಮನೆಗೊಂದು ಮರ, ಊರಿಗೊಂದು ವನ ನಿರ್ಮಾಣ ಮಾಡಲು ಬಾಲ್ಯದಿಂದಲೇ ಆಸಕ್ತಿ ಹೊಂದಬೇಕು. ಸ್ವ ಇಚ್ಛೆಯಿಂದ ಸಸಿಗಳನ್ನು ನೆಟ್ಟಿ ಪೋಷಿಸಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯಶಿಕ್ಷಕ ಅರ್ಜುನ್ ಪವರ್ ಮಾತನಾಡಿ, ಇತ್ತೀಚೆಗೆ ವಿದ್ಯಾರ್ಥಿಗಳು ಆನ್‌ಲೈನ್, ಮೊಬೈಲ್‌ಗಳಿಗೆ ದಾಸರಾಗಿದ್ದರೆ. ಈ ರೀತಿಯ ಆಟೋಟಗಳು ಆರೋಗ್ಯಕ್ಕೆ ಹಾನಿಕಾರಕ. ಇವುಗಳಿಂದ ಹೊರಬಂದು ಭೂಮಿ ಸಂರಕ್ಷಿಸುವ ನಿಟ್ಟಿನಲ್ಲಿ ಪಠ್ಯದ ಜತೆಗೆ ಪರಿಸರ ಬಗ್ಗೆ ಹೆಚ್ಚು ಕಾಳಜಿ ಹೊಂದಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ವಿಜ್ಞಾನ ಪರಿಷತ್ ಉಪಾಧ್ಯಕ್ಷ ಓಂಕಾರಪ್ಪ, ಖಜಾಂಚಿ ಸದಾಶಿವಮೂರ್ತಿ, ಶಿಕ್ಷಕ ಸತೀಶ್, ಬಿ.ಎಲ್.ಜಗದೀಶ್, ವಿಜ್ಞಾನ ಪರಿಷತ್ ಸಹ ಕಾರ್ಯದರ್ಶಿ ಎಸ್.ಬಿ.ಪ್ರಶಾಂತ್ ಉಪಸ್ಥಿತರಿದ್ದರು.