

ನಾಗಮಂಗಲ: ತಾಲೂಕಿನ ಎಚ್.ಎನ್.ಕಾವಲ್ ಸಮೀಪ ‘ಚಿಕ್ಕತಿರುಪತಿ’ ಎಂದೇ ಖ್ಯಾತಿ ಪಡೆದಿರುವ ಬೆಟ್ಟದಗುಡಿ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಗಿಡದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ಅರಣ್ಯ ಪ್ರದೇಶದಲ್ಲಿರುವ ಗಿಡಮರಗಳ ನಡುವೆ ನಡೆದ ಒಂದು ದಿನದ ಜಾತ್ರೆಯಲ್ಲಿ ತಿರುಪತಿ ತಿಮ್ಮಪ್ಪನ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮುಡಿ, ಬಾಯಿಬೀಗ, ಕೇಶಮುಂಡನ ಹರಕೆ ತೀರಿಸಿದ ಬಳಿಕ ಗೋವಿಂದ ನಾಮಸ್ಮರಣೆ ಮಾಡುವ ಮೂಲಕ ಭಕ್ತಿನಮನ ಸಲ್ಲಿಸಿದರು.
ಈ ಹಿಂದಿನ ಪದ್ಧತಿಯಂತೆ ತಿರುಪತಿಗೆ ತೆರಳುವ ಮುನ್ನ ಹರಕೆ ಹೊತ್ತ ಭಕ್ತರು ಜಾತ್ರೆಯಲ್ಲಿ ಪಾಲೊಂಡು ಶ್ರೀವೆಂಕಟರಮಣಸ್ವಾಮಿ ದೇವಸ್ಥಾನದ ಆಸುಪಾಸಿನಲ್ಲಿರುವ ಗಿಡ ಮರಗಳ ಮಧ್ಯದಲ್ಲಿ ದಾಸಭಕ್ತರು ತರುವ ದೇವರುಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಬಳಿಕ ತಾವು ಮಾಡಿ ತಂದಿದ್ದ ಮಾಂಸದೂಟವನ್ನು ದೇವರಿಗೆ ನೈವೇದ್ಯ ಇಟ್ಟು ಪೂಜಿಸಿದರು. ನಂತರ ಭಕ್ತರಿಗೆ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಸುವ ಮೂಲಕ ಸಂಜೆಯಾಗುತ್ತಿದ್ದಂತೆ ತಮ್ಮ ಮುಂದಿನ ಪ್ರಯಾಣ ಬೆಳೆಸಿದರು.
ತಿರುಪತಿಗೆ ಹೋಗಲು ಸಾಧ್ಯವಾಗದ ಭಕ್ತರು ಬಾಯಿಬೀಗ, ಮುಡಿ ಸೇವೆಯೊಂದಿಗೆ ಇಲ್ಲಿಯೇ ದೇವರ ಹರಕೆ ತೀರಿಸಿಕೊಂಡರು. ಜಾತ್ರೆಗೆ ಜಿಲ್ಲೆ ಸೇರಿದಂತೆ ನಾಡಿನ ವಿವಿಧೆಡೆಗಳಿಂದ ಸಹಸ್ರಾರು ಭಕ್ತರು ಆಗಮಿಸಿದ್ದರು. ಇಡೀ ಜಾತ್ರೆಯಲ್ಲಿ ನೂರಾರು ದಾಸ ಭಕ್ತರ ಶಂಖ, ಜಾಗಟೆಗಳ ಸದ್ದಿನೊಂದಿಗೆ ಗೋವಿಂದ ನಾಮಸ್ಮರಣೆ ಮೊಳಗಿದವು. ಭಕ್ತ ಸಮೂಹಕ್ಕೆ ಯಾವುದೇ ತೊಂದರೆಯಾಗದಂತೆ ನಾಗಮಂಗಲ ಕೆಎಸ್‌ಆರ್‌ಟಿಸಿ ಡಿಪೋದಿಂದ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಆರೋಗ್ಯ ಇಲಾಖೆಯಿಂದ ಪ್ರಥಮ ಚಿಕಿತ್ಸೆಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಗತ್ಯ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.