

ಹಳಿಯಾಳ: ವಸಂತ ಮಾಸ ಆರಂಭವಾಗುತ್ತಿದ್ದು, ಈ ಸಂದರ್ಭದಲ್ಲಿ ಗಿಡ- ಮರಗಳು ಚಿಗುರೊಡೆಯುತ್ತವೆ. ಆದ್ದರಿಂದ ಈ ಹೋಳಿ ಹಬ್ಬದ ಸಂದರ್ಭದಲ್ಲಿ ಅರಣ್ಯದ ಮರಗಳನ್ನು ಕಡಿದು ಗಣಿ ಸ್ಥಾಪಿಸುವ ಪದ್ಧತಿ ಕೈ ಬಿಟ್ಟು ಸಸಿ ನೆಡುವ ಮೂಲಕ ಹೋಳಿ ಹಬ್ಬ ಆಚರಿಸುವಂತೆ ಹಳಿಯಾಳ ಅರಣ್ಯ ಇಲಾಖೆ ಡಿಎಫ್ಒ ಪ್ರಶಾಂತ ಕೆ.ಸಿ. ಹೇಳಿದರು.
ಪಟ್ಟಣದ ಅರಣ್ಯ ಇಲಾಖೆಯ ಸಭಾಂಗಣದಲ್ಲಿ ಮಂಗಳವಾರ ಸಾರ್ವಜನಿಕರೊಂದಿಗೆ ಹಮ್ಮಿಕೊಂಡಿದ್ದ ಹೋಳಿ ಹಬ್ಬದ ಹೋಳಿ ಗಣಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಸಂಸ್ಕೃತಿ ಆಚರಣೆಗಳನ್ನು ಬಿಟ್ಟರೆ ಅದು ನಶಿಸಿ ಹೋಗುತ್ತದೆ. ಆದರೆ, ನಾವು ನಮ್ಮ ಆಚರಣೆಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ ಅತ್ಯಮೂಲ್ಯ ಅರಣ್ಯ ರಕ್ಷಿಸಲು ಸಾಧ್ಯ ಎಂದರು.
ಹಳಿಯಾಳ ವಿಭಾಗದಲ್ಲಿ ಅರಣ್ಯದ ಮರಗಳನ್ನು ಕಡಿದು ಗಣಿ ಸ್ಥಾಪಿಸಿ ಹಬ್ಬ ಆಚರಿಸುವ ಪದ್ಧತಿ ಜಾರಿಯಲ್ಲಿದೆ. ಆದರೆ, ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರು ಗಣಿ ಸ್ಥಾಪಿಸುವ ಬದಲಾಗಿ ಸಸಿಗಳನ್ನು ನೆಡುವ ಮೂಲಕ ಹಬ್ಬ ಆಚರಿಸುತ್ತಿದ್ದಾರೆ. ಈ ಪದ್ಧತಿಯನ್ನು ಮುಂದುವರಿಸೋಣ ಎಂದರು.
ತಹಸೀಲ್ದಾರ್ ಪ್ರವೀಣ ಹುಚ್ಚನ್ನವರ ಮಾತನಾಡಿ, ಪ್ರಕೃತಿಯಿಂದ ನಾವು ಭಾರಿ ಪ್ರಮಾಣದಲ್ಲಿ ಲಾಭ ಪಡೆದುಕೊಳ್ಳುತ್ತಿದ್ದೇವೆ ಹೊರತು ಪ್ರಕೃತಿ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಇದನ್ನು ತಡೆಗಟ್ಟಬೇಕೆಂದರೆ ಅರಣ್ಯವನ್ನು ಉಳಿಸಿ- ಬೆಳೆಸಬೇಕು. ಮರಗಳನ್ನು ಕಡಿಯದೆ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವಂತಾಗಬೇಕು ಎಂದರು.
ಸಭೆಯಲ್ಲಿ ಮಾಜಿ ಎಸಿಎಫ್ ಬೀರಪ್ಪ, ಆರ್ಎಫ್ಒ ಬಸವರಾಜ ಎಂ., ಪ್ರಮುಖರಾದ ಕಿರಪ್ಪಾ ಕಂಚನಾಳಕರ, ಗಣಪತಿ ಮಿರಾಶಿ, ಸತ್ಯಜಿತ್ ಗಿರಿ, ಚಂದ್ರಕಾಂತ ಕಮ್ಮಾರ, ಕರ್ನಾಟಕ ಬಸವರಾಜ ಬೆಂಡಿಗೇರಿಮಠ, ಸಂತೋಷ ಹಬ್ಬು ಇತರರು ಇದ್ದರು.