ಒಳಾಂಗಣ ಕ್ರೀಡಾಂಗಣ ಪ್ರಾರಂಭಿಸಲು ಯೋಜನೆ

ಒಳಾಂಗಣ ಕ್ರೀಡಾಂಗಣ ಪ್ರಾರಂಭಿಸಲು ಯೋಜನೆ
Published on

ಸೋಮವಾರಪೇಟೆ: ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.

ಬಿಟಿಸಿಜಿ ಕಾಲೇಜಿನಲ್ಲಿ 1 ಕೋಟಿ ರೂ.ಗಳ ವೆಚ್ಚದಲ್ಲಿ ಬಾಲಕರ ಹಾಸ್ಟೇಲ್ ಕಾಮಗಾರಿಗೆ ಭೂಮಿ ಪೂಜೆಯನ್ನು ಸೋಮವಾರ ನೆರವೇರಿಸಿ ಮಾತನಾಡಿ, ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲೇಬೇಕು. ಕ್ರೀಡಾಂಗಣದಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಮೊದಲ ಆಧ್ಯತೆಯಿರುತ್ತದೆ. ನಂತರ ಸಾರ್ವಜನಿಕರಿಗೂ ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿಯೇ ಉನ್ನತ ಶಿಕ್ಷಣ ನೀಡಬೇಕು ಎಂಬ ಸದುದ್ದೇಶದಿಂದ ಹಿರಿಯರು ಸ್ಥಾಪಿಸಿರುವ ಯಡೂರು ಬಿಟಿಜಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿಗೆ ಅನುದಾನ ತರುವುದಾಗಿ ಘೋಷಿಸಿದರು.

ಕೊಡಗಿನಿಂದ ಪದವಿ ವ್ಯಾಸಂಗಕ್ಕೆ ಮಂಗಳೂರು, ಮೈಸೂರು, ಬೆಂಗಳೂರಿಗೆ ಹೋಗುವಂತಹ ಪರಿಸ್ಥಿತಿ ಇದೆ. ಬಹುತೇಕ ರೈತರು ಬ್ಯಾಂಕ್‌ಗಳಲ್ಲಿ ಸಾಲ ಮಾಡಿ, ನಗರ ಪ್ರದೇಶಗಳಲ್ಲಿ ಮಕ್ಕಳನ್ನು ಓದಿಸುತ್ತಿದ್ದಾರೆ. ಬಿಟಿಜಿಸಿ ಕಾಲೇಜಿಗೆ ಎಲ್ಲ ಸೌಲಭ್ಯಗಳನ್ನು ಓದಗಿಸಿದರೆ ವಿದ್ಯಾರ್ಥಿಗಳು ಇಲ್ಲಿಯೇ ಉಚಿತವಾಗಿ ಕಲಿಕೆ ಮುಂದುವರಿಸಬಹುದು. ಈ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಕರ್ನಾಟಕ ಹೌಸಿಂಗ್ ಬೋರ್ಡ್ ಮೂಲಕ ಸರ್ಕಾರ 1 ಕೋಟಿ ರೂ.ಗಳ ಅನುದಾನ ಕಲ್ಪಿಸಿದೆ. ಬಾಲಕರ ವಸತಿ ಗೃಹ, ಶೌಚಗೃಹ, ಒಂದು ಕ್ಲಾಸ್ ರೂಂ ನಿರ್ಮಾಣ ಮಾಡಲಾಗುತ್ತದೆ. ಉನ್ನತ ಶಿಕ್ಷಣ ಸಚಿವ ಎಚ್.ಸಿ.ಸುಧಾಕರ್ ಅವರಿಗೆ ಮನವಿ ಮಾಡಿದ ತಕ್ಷಣ ಅನುದಾನ ಕಲ್ಪಿಸಿದ್ದಾರೆ. ಕಾಲೇಜಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಉಪನ್ಯಾಸಕರು ಕೂಡ ಗುಣಮಟ್ಟದ ಶಿಕ್ಷಣವನ್ನು ನೀಡಬೇಕಿದೆ. ಉತ್ತಮ ಫಲಿತಾಂಶ ಗಳಿಸಿದರೆ, ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚಾಗಲಿದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಡಿಸಿಸಿ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ಪ್ರಮುಖರಾದ ಚೇತನ್, ಡಿ.ಯು.ಕಿರಣ್, ಲಾರೆನ್ಸ್, ಎ.ಆರ್.ಕುಶಾಲಪ್ಪ, ನಾಗೇಶ್, ಯಡೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಮಲ್ಲಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net