ದಸರಾ ಉತ್ಸವ ಮೊಟಕುಗೊಳಿಸುವ ಹುನ್ನಾರ

Screenshot_2025-09-12-22-55-48-92.jpg
Published on

ಧಾರವಾಡ: ಹು-ಧಾ ಮಹಾನಗರ ಪಾಲಿಕೆಯು ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿಗೆ ದಸರಾ ಉತ್ಸವದ ಅಂಗವಾಗಿ ವಸ್ತು ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಕಡಪಾ ಮೈದಾನ ನೀಡದೇ ಉತ್ಸವವನ್ನೇ ಮೊಟಕುಗೊಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಸಮಿತಿ ಅಧ್ಯಕ್ಷ ಗುರುರಾಜ ಹುಣಸಿಮರದ ಆರೋಪಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸೆ. 12ರಿಂದ ಅಕ್ಟೋಬರ್ 12ರವರೆಗೆ ಕಡಪಾ ಮೈದಾನದಲ್ಲಿ ವಸ್ತು ಪ್ರದರ್ಶನ ನಡೆಸಲು ನಿರ್ಧರಿಸಲಾಗಿದೆ. ಇದಕ್ಕೆ ಪಾಲಿಕೆ ನಿಗಧಿಪಡಿಸಿದ ಬಾಡಿಗೆ ನೀಡುವುದಾಗಿ ಒಪ್ಪಿಕೊಂಡು ಅರ್ಜಿ ಸಲ್ಲಿಸಿದ್ದೇವೆ. ಆದರೆ ಪಾಲಿಕೆ ದರ ನಿಗಧಿಪಡಿಸಿ ಈವರೆಗೂ ಚಲನ್ ನೀಡುತ್ತಿಲ್ಲ. ಈಗ ಅಲ್ಲಿ ಕೆಲಸ ನಡೆದಿದೆ ಎಂದು ಸಬೂಬು ಹೇಳುತ್ತಿದೆ ಎಂದರು.

ಧಾರವಾಡ ಜಂಬೂ ಸವಾರಿ ಉತ್ಸವ ಕಳೆದ 20 ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದರಂತೆ ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಟಾಕಿ ಅಂಗಡಿ ಹಾಗೂ ದಸರಾ ಉತ್ಸವಕ್ಕೆ ಮಾತ್ರ ಬಾಡಿಗೆ ನೀಡಿ ಠರಾವು ಪಾಸ್ ಮಾಡಲಾಗಿದೆ. ಆದರೆ, ಇಲ್ಲಿಯವರೆಗೆ ಯಾವುದೇ ಕಾಮಗಾರಿಯನ್ನೂ ನಡೆಸದ ಪಾಲಿಕೆ ಈಗ ಕಡಪಾ ಮೈದಾನಕ್ಕೆ ಜೆಸಿಬಿ ಕಳುಹಿಸಿ ಕಿರಿಕಿರಿ ಮಾಡುತ್ತಿದೆ. ಈಗ ಅಲ್ಲಿ ವಸ್ತು ಪ್ರದರ್ಶನ ಮಳಿಗೆ ಹಾಕಲು ಪೆಂಡಾಲ್‌ಗಳು ಬಂದಿವೆ. ಆದರೆ ಪಾಲಿಕೆ ಚಲನ್ ನೀಡದೆ ಪೆಂಡಾಲ್ ಹಾಕಲು ಅನುಮತಿ ನೀಡುತ್ತಿಲ್ಲ ಎಂದು ಹೇಳಿದರು.

ಈ ಬಗ್ಗೆ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ್ ಹಾಗೂ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಅವರನ್ನು ಕೇಳಿದಾಗ ಶಾಸಕ ಅರವಿಂದ ಬೆಲ್ಲದ ಅನುಮತಿ ನೀಡದಂತೆ ನಿರ್ದೇಶನ ನೀಡಿರುವುದಾಗಿ ಹೇಳುತ್ತಿದ್ದಾರೆ. ನಾವು 11ಸಾವಿರ ಚದುರ ಅಡಿ ಮೈದಾನವನ್ನು ಬಾಡಿಗೆ ಕೇಳಿದ್ದೇವೆ. ಇದಕ್ಕೆ ತಗಲುವ 10ಲಕ್ಷ ರೂ. ಬಾಡಿಗೆ ಪಾವತಿಸಲೂ ಸಿದ್ಧರಿದ್ದೇವೆ. ಆದರೂ ಏಕೆ ಹೀಗೆ ನಡೆದುಕೊಳ್ಳಲಾಗುತ್ತಿದೆ ಗೊತ್ತಿಲ್ಲ ಎಂದು ಬೇಸರಿಸಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕೇಂದ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾ ತಂಡಗಳನ್ನು ಕಳುಹಿಸುವ ಭರವಸೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ 25ಲಕ್ಷ ರೂ. ಅನುದಾನ ಕೊಡಿಸಲು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿದ್ದಾರೆ. ಆದರೆ ಹಿಂದೂ ಹಬ್ಬದ ಆಚರಣೆಗೆ ಶಾಸಕ ಬೆಲ್ಲದ ಏಕೆ ಅಡ್ಡಿಪಡಿಸುತ್ತಿದ್ದಾರೆ ಗೊತ್ತಿಲ್ಲ. ಮೇಯರ್, ಆಯುಕ್ತರು ಯಾರದೋ ಕೈಗೊಂಬೆಯಾಗಿ ಕೆಲಸ ಮಾಡಬೇಕಾಗಿಲ್ಲ. ಅವರು ಮೈದಾನ ಬಾಡಿಗೆ ನೀಡದಿದ್ದರೆ ಹೋರಾಟ ಅನಿವಾರ್ಯ ಆಗಲಿದೆ. ಹುಬ್ಬಳ್ಳಿಯ ನೆಹರು ಮೈದಾನ ಹಾಗೂ ಧಾರವಾಡ ಕಡಪಾ ಮೈದಾನಕ್ಕೆ ನಿಗದಿಪಡಿಸಿದ ಬಾಡಿಗೆ ದರದಲ್ಲಿಯೇ ಭಾರಿ ವ್ಯತ್ಯಾಸ ಕಂಡುಬಂದಿದೆ. ಈ ಬಗ್ಗೆ ಪಾಲಿಕೆ ಪುನರ್ ಪರಿಶೀಲನೆ ಮಾಡಬೇಕು ಎಂದು ಹುಣಸಿಮರದ ಮನವಿ ಮಾಡಿಕೊಂಡರು.

ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಮಾತನಾಡಿ, 2019ರಲ್ಲಿಯೂ ಮೈದಾನ ಪಡೆಯಲು ಅಡ್ಡಿ ವ್ಯಕ್ತಪಡಿಸಲಾಗಿತ್ತು. 13ಲಕ್ಷ ಬಾಡಿಗೆ ಶುಲ್ಕ ತುಂಬಲು ಹೇಳಿದಾಗ ನಾವು ತುಂಬಿದ್ದೇವು. ಆದರೆ ಇದು ಹೆಚ್ಚಾಗಿದೆ ಎಂದು ಪಾಲಿಕೆ ಸಭೆಯಲ್ಲಿ ನಿರ್ಧರಿಸಿ ಶೇ. 30ರಷ್ಟು ಅಂದರೆ 4ಲಕ್ಷ ರೂ. ಹಣವನ್ನು ವಾಪಸ್ ಕೊಡುವುದಾಗಿ ಹೇಳಲಾಗಿತ್ತು. ಆದರೆ 2019ರಿಂದ ಇಲ್ಲಿಯವರೆಗೆ ಆ ಹಣ ಪಾಲಿಕೆಯಲ್ಲಿಯೇ ಉಳಿದಿದೆ. ಬಡ್ಡಿ ಸೇರಿ ಅದು ಈಗ 9ಲಕ್ಷ ದಾಟಲಿದೆ. ಪಾಲಿಕೆ ಏಕೆ ಈ ತಾರತಮ್ಯ ಮಾಡುತ್ತಿದೆ. ಬೆಲ್ಲದ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಾರದು ಎಂದರು.

ಮುಖಂಡರಾದ ನಾಗರಾಜ ಗುರಿಕಾರ, ಆನಂದ ಮುಶಣ್ಣವರ, ಮೆಹಬೂಬ್ ಪಠಾಣ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net