ಜನವರಿಗೆ ಮೈಸೂರು ಫೆಸ್ಟ್‌ಗೆ ಯೋಜನೆ: ಎಂ.ಕೆ.ಸವಿತಾ

4
Published on

ಮೈಸೂರು: ಪ್ರವಾಸೋದ್ಯಮ ಅಭಿವೃದ್ಧಿಗೆ 2025 ರ ಜನವರಿಯಲ್ಲಿ ‘ಮೈಸೂರು ಫೆಸ್ಟ್’ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಪ್ರವಾಸೋಧ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ. ಕೆ. ಸವಿತಾ ಹೇಳಿದರು.

ಪ್ರವಾಸೋದ್ಯಮ ಅಭಿವೃದ್ಧಿ, ಮೈಸೂರು ಫೆಸ್ಟ್ ಸಂಬಂಧ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಉದ್ಯಮಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಜನವರಿ 2025 ಕ್ಕೆ ಮೈಸೂರು ಫೆಸ್ಟ್ ಮಾಡುವ ಯೋಜನೆ ಇದ್ದು, ಇದನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸುವ ಕುರಿತು ಚಿಂತಿಸಲಾಗುತ್ತಿದೆ. ಇದರಲ್ಲಿ ಚಿತ್ರ ಸಂತೆ, ಫುಡ್‌ಫೆಸ್ಟ್ ಆಯೋಜಿಸಲಾಗುವುದು. ಮೈಸೂರು ಫೆಸ್ಟ್‌ಗೆ ಹೊರ ಜಿಲ್ಲೆ ಹೊರ ರಾಜ್ಯಗಳ ಜನರನ್ನು ಆಕರ್ಷಿಸಲು ಯೋಜನೆ ರೂಪಿಸಲಾಗುವುದು. ಮನರಂಜನೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ. ಇದರಿಂದ ನಗರದ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರ ಆಗುತ್ತದೆ. ಪ್ರವಾಸಿ ತಾಣಗಳ ಅಭಿವೃದ್ಧಿಯಿಂದ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಗೆ ದೇಶ ವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸಿಗರ ಹೆಚ್ಚು ಭೇಟಿಯಿಂದ ಹೋಟೆಲ್, ರೆಸ್ಟೋರೆಂಟ್ ಉದ್ಯಮ ಅಭಿವೃದ್ಧಿ ಹೊಂದುತ್ತದೆ. ಹಾಗಾಗಿ ಮೈಸೂರು ಪ್ರವಾಸಿ ಜಿಲ್ಲೆಯಾಗಿದ್ದು, ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕೈಗಾರಿಕೋದ್ಯಮಿಗಳು, ಹೂಡಿಕೆದಾರರು ಕೈಜೋಡಿಸಿ ಸಹಕರಿಸಬೇಕಿದೆ ಎಂದು ಕೋರಿದರು.

ಈಗಾಗಲೇ ‘ಮೈಸೂರು ಸುಗಂಧ’ ಕಾರ್ಯಕ್ರಮ ಮೂರು ದಿನಗಳ ಕಾಲ ಯಶಸ್ವಿಯಾಗಿ ನಡೆಯಿತು. ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ವಿಜೇತ ಸಂಗೀತ ವಿದ್ವಾಂಸರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕರ್ನಾಟಕ ಸಂಗೀತದ ದಾಸ ಸಾಹಿತ್ಯ, ಪುರಂದರ ದಾಸ, ಕನಕದಾಸರ ಕೀರ್ತನೆಗಳ ಸಂಗೀತ ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿಬಂದಿತು ಎಂದು ಸಂತಸ ವ್ಯಕ್ತಪಡಿಸಿದರು.

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಾಗೂ ಮೈಸೂರು ಫೆಸ್ಟ್ ಕಾರ್ಯಕ್ರಮಕ್ಕೆ ಸಹಕರಿಸಿದ ನೇರ ಪಾಲುದಾರರಿಗೆ ಇದೇ ಸಂದರ್ಭದಲ್ಲಿ ಧನ್ಯವಾದ ತಿಳಿಸಿ ಸನ್ಮಾನಿಸಲಾಯಿತು.

ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಪ್ರಭುಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಸ್ಕಾಲ್ ಇಂಟರ್ ನ್ಯಾಷನಲ್ ಮೈಸೂರು ವಿಭಾಗದ ಅಧ್ಯಕ್ಷ ಜಯಕುಮಾರ್, ಮೈಸೂರು ಸಂಘ ಸಂಸ್ಧೆಗಳ ಒಕ್ಕೂಟದ ಅಧ್ಯಕ್ಷ ಹಾಗೂ ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್. ಪ್ರಶಾಂತ್, ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಲಿಂಗರಾಜು, ಹೋಟೆಲ್ ಜೇಡ್ ಗಾರ್ಡನ್ ಭರತ್‌ಗೌಡ, ಪೈ ವಿಸ್ತಾ ಹೋಟೇಲ್ ಮಹೇಶ್ ಕುಮಾರ್, ಫೈನ್ ಆರ್ಟ್ಸ್‌ನ ಅಶೋಕ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net