

ದೇವದುರ್ಗ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಸಜ್ಜನ ರಾಜಕಾರಣಿಯಾಗಿದ್ದು, ಅಧಿಕಾರಾವಧಿಯಲ್ಲಿ ನಾಡಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅದರಲ್ಲೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿದ್ದರು ಎಂದು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಹೇಳಿದರು.
ಇದನ್ನೂ ಓದಿ: http://ಯೋಜನೆಗಳ ಮೂಲಕ ಮನೆಮಾತಾಗಿದ್ದಾರೆ ಅರಸು
ಮಿನಿವಿಧಾನಸೌಧದಲ್ಲಿ ತಾಲೂಕು ಆಡಳಿತ, ಹಿಂದುಳಿದ ವರ್ಗಗಳ ಒಕ್ಕೂಟ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನ್ಮದಿನದ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಭೂ ಸುಧಾರಣಾ ಕಾಯ್ದೆ, ಕರ್ನಾಟಕ ಋಣಮುಕ್ತ ಕಾಯ್ದೆ ಒಳಗೊಂಡಂತೆ ದೀನ ದಲಿತರ, ಬಡವರ ಪರವಾದ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಡಿ.ದೇವರಾಜ ಅರಸು ಮನೆಮಾತಾಗಿದ್ದಾರೆ ಎಂದು ತಹಸೀಲ್ದಾರ್ ಹೇಳಿದರು.
ಹಿಂದುಳಿದ ವರ್ಗಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಶರಣಗೌಡ ಸುಂಕೇಶ್ವರಹಾಳ ಮಾತನಾಡಿ, ಉಳುವವನೇ ಒಡೆಯ, ಹಾವನೂರು ಆಯೋಗ ರಚನೆ ಸೇರಿ ಅನೇಕ ಪ್ರಮುಖ ನಿರ್ಧಾರಗಳು ಡಿ.ದೇವರಾಜ ಅರಸು ಅವರ ಬಡವರ ಪರ ಕಾಳಜಿಯ ಪ್ರತಿಫಲವಾಗಿವೆ.
ಅರಸು ಜಾರಿಗೊಳಿಸಿದ ಯೋಜನೆಗಳಿಂದಾಗಿ ಇಂದಿನ ಪೀಳಿಗೆಗೆ ವಿಶೇಷವಾಗಿ ಹಿಂದುಳಿದ ವರ್ಗಗಳ ಸಮುದಾಯಕ್ಕೆ ನ್ಯಾಯ ಸಿಗುತ್ತಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಾನಪ್ಪ ಬಡಿಗೇರ ಇದ್ದರು.