

ಚಿಕ್ಕೋಡಿ: ಕರಗಾಂವ ಹಾಗೂ ಜೈ ಹನುಮಾನ ಏತ ನೀರಾವರಿ ಯೋಜನೆಗೆ ಮಂಜೂರಾತಿ ನೀಡುವಂತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಹಿರಿಯ ಧುರೀಣ ಬಿ.ಆರ್. ಸಂಗಪ್ಪಗೋಳ ನೇತೃತ್ವದಲ್ಲಿ ರೈತ ಮುಖಂಡರು ಬುಧವಾರ ಚಿಕ್ಕೋಡಿ ಪ್ರವಾಸಿಮಂದಿರದಲ್ಲಿ ಮನವಿ ಸಲ್ಲಿಸಿ ಒತ್ತಾಯಿಸಿದರು.
ಚಿಕ್ಕೋಡಿ ತಾಲೂಕಿನ ದಕ್ಷಿಣ ಭಾಗದ ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ 21 ಹಳ್ಳಿಗಳು ಸತತ ಬರಗಾಲದಿಂದ ಬಳಲುತ್ತಿದ್ದು ಮಡ್ಡಿಭಾಗವಾಗಿರುವ ಈ ಪ್ರದೇಶ ನೀರಾವರಿಯಿಂದ ವಂಚಿತವಾಗಿದೆ. ಹೀಗಾಗಿ ಈ ಭಾಗದ ಶೇ.50 ಜನರು ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಗೆ ಉದ್ಯೋಗ ಅರಸಿ ಹೋಗುತ್ತಾರೆ. ದಶಕಗಳಿಂದಲೂ ಈ ಭಾಗದ ರೈತರು ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಪ್ರಯತ್ನ ಮಾಡುತ್ತಲೆ ಬಂದಿದ್ದಾರೆ. ಆದರೆ, ಈವರೆಗೆ ರೈತರ ಕನಸು ನನಸಾಗಿಲ್ಲ, ಆದ್ದರಿಂದ ಜಿಲ್ಲೆಯವರೇ ಜಲಸಂಪನ್ಮೂಲ ಸಚಿವರಾಗಿರು ವುದರಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.
ಯೋಜನೆಗೆ ಶೀಘ್ರ ಮಂಜೂರಾತಿ ನೀಡಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು. ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕ ಡಿ.ಎಂ.ಐಹೊಳೆ, ಜಗದೀಶ ಕವಟಗಿಮಠ, ಸಂಜಯಗೌಡ ಪಾಟೀಲ, ರಾಜುಗೌಡ ಪಾಟೀಲ, ಮಹೇಶ ಭಾತೆ, ದುಂಡಪ್ಪ ಬೆಂಡವಾಡೆ, ನಾಗೇಶ ಕಿವಡ ಇತರರು ಇದ್ದರು.