

ಕೊಪ್ಪಳ: ನಗರದ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಬಾಲ ಮಂದಿರದ ಮಕ್ಕಳು ಶನಿವಾರ ಭೇಟಿ ನೀಡಿ ತಾರಾಲಯ, ಸೌರಮಂಡಲ, ವಿವಿಧ ಭೌತಶಾಸ್ತ್ರೀಯ ರಚನೆ ವೀಕ್ಷಿಸಿದರು.
ಸೌರಮಂಡಲ ರಚನೆ, ಸೂರ್ಯ ಮತ್ತು ವಿವಿಧ ನಕ್ಷತ್ರಗಳು, ಗ್ರಹಗಳು, ಧೂಮಕೇತು, ಉಲ್ಕೆ ಮೊದಲಾದವುಗಳ ದೃಶ್ಯಗಳನ್ನು ಕಣ್ತುಂಬಿಕೊಂಡರು.
ಲುವ ಚೆಂಡು, ಭೂಮಿಯ ಚಲನೆ, ಬೆಳಕು, ನೆರಳು, ವರ್ಣಗಳು, ಮ್ಯಾಜಿಕ್ ಟ್ಯಾಪ್, ಉಂಗುರಗಳಿಂದ ಉಂಟಾಗುವ ದೃಷ್ಟಿಭ್ರಮೆ, ಅನಂತ ಬಾವಿ, ಚಿತ್ರಗುಣಕ, ಕನ್ನಡಿ ಮತ್ತು ಪ್ರತಿಬಿಂಬ, ಪೆಡಲ್ ಪವರ್ ಹಾಗೂ ವಿವಿಧ ವಿಜ್ಞಾನ ಮಾದರಿಗಳ ಕುರಿತು ಕೇಂದ್ರದ ಮುಖ್ಯಸ್ಥ ಮೈಲಾರಪ್ಪ ಮಕ್ಕಳಿಗೆ ವಿವರಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೊಟಗಾರ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ಪ್ರಾದೇಶಿಕ ವಿಜ್ಞಾನ ಕೇಂದ್ರ ಮಾಡುತ್ತಿರುವ ಪ್ರಯತ್ನಗಳು ಶ್ಲಾಘನೀಯ. ಎಲ್ಲ ಕ್ರಿಯೆ, ಚಟುವಟಿಕೆಗಳಿಗೆ ವಿಜ್ಞಾನವೇ ಆಧಾರ.
ವಿಜ್ಞಾನವೊಂದೇ ಸತ್ಯ. ಅಂಧ ನಂಬಿಕೆಗಳನ್ನು ಕೈಬಿಟ್ಟು ಪ್ರತಿಯೊಂದನ್ನು ವೈಜ್ಞಾನಿಕವಾಗಿ ನೋಡುವ, ಅರ್ಥೈಸಿಕೊಳ್ಳುವ ಪ್ರಯತ್ನಗಳನ್ನು ಮಾಡಬೇಕು. ಕೊಪ್ಪಳದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದರು.
ಬಾಲಮಂದಿರದ ಅಧೀಕ್ಷಕಿ ಮಂಜುಳಾ ಬುದ್ದಪ್ಪನವರ್, ಸಾಂಸ್ಥಿಕ ರಕ್ಷಣಾಧಿಕಾರಿ ಸುಮಲತಾ ಎಂ.ಡೊಳ್ಳಿನ, ಸಿಬ್ಬಂದಿ ಶಿವಲೀಲಾ ವನ್ನೂರ, ನೇತ್ರಾ ಹಡಪದ, ಮಂಜುನಾಥ, ಮಕ್ಕಳ ಜಾಗೃತಿ ಸಂಸ್ಥೆಯ ಪ್ರಕಾಶ, ಶರಣಮ್ಮ ಇತರರಿದ್ದರು.