ಶಿಷ್ಟಾಚಾರ ಉಲ್ಲಂಘನೆ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಚಿಂತನೆ : ಶಾಸಕ ಟಿ.ಡಿ.ರಾಜೇಗೌಡ

TD Rajegowda
Published on

ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದಲ್ಲಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡುವ ಚಿಂತನೆ ನಡೆಸಿರುವುದಾಗಿ ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಸ್ಥಳೀಯ ಶಾಸಕರ ಗಮನಕ್ಕೆ ಬಾರದೆ ಪಿಎಂಜಿಎಸ್‍ವೈ ಯೋಜನೆಯ ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಗಿದೆ. ಜಿಪಂ ಅಧ್ಯಕ್ಷರ ಮುಖಾಂತರ ಸದಸ್ಯರ ಗಮನಕ್ಕೆ ತಂದು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಪ್ರತಿಯೊಂದು ಕಾರ್ಯಕ್ರಮ ಮಾಡಬೇಕು. ಇದು ಸಂವಿಧಾನಾತ್ಮಕ ಹಕ್ಕು. ಆದರೆ ಚುನಾವಣೆ ಘೋಷಣೆಯಾದ ದಿನ ಬೆಳಗ್ಗೆ ಸಂಸದರು ಶೃಂಗೇರಿ ಕ್ಷೇತ್ರದಲ್ಲಿ ಮಾಜಿ ಶಾಸಕರ ಜತೆಗೂಡಿ ನಮ್ಮ ಗಮನಕ್ಕೆ ತರದೆ ಈ ಕಾರ್ಯಕ್ರಮ ಮಾಡಿದ್ದಾರೆ. ಹಾಗಾಗಿ ವಿಧಾನಸಭೆಯ ಮುಂದಿನ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡನೆ ಮಾಡುವುದಾಗಿ ಹೇಳಿದರು.

ಸಿಎಂ ಸಾಕಷ್ಟು ಅನುದಾನ ನೀಡಿದ್ದಾರೆ
ಸದನದಲ್ಲಿ ನಾನು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಮಲೆನಾಡಿನ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಸಾಕಷ್ಟು ಅನುದಾನ ಮಂಜೂರು ಮಾಡಿದ್ದಾರೆ. ಅದನ್ನು ತಾನೇ ಬಿಡುಗಡೆ ಮಾಡಿಸಿದ್ದು ಎಂದು ಮಾಜಿ ಶಾಸಕರು ಹೇಳಿಕೊಂಡು ಗುದ್ದಲಿಪೂಜೆ ನೆರವೇರಿಸಿರುವುದು ಎಷ್ಟು ಸರಿ? ಶೃಂಗೇರಿ ಕ್ಷೇತ್ರದಲ್ಲಿ ಫ್ಲೆÉ್ಲಕ್ಸ್‍ಗಳನ್ನು ತೆಗೆಸುವ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.

ಅಧಿಕಾರ ಹಾಗೂ ಹಣದ ಅಮಿಷ
ಜಿಪಂನಲ್ಲಿ ವಿರೋಧ ಪಕ್ಷದ ಸದಸ್ಯರಿಗೆ ಹಣ, ಅಧ್ಯಕ್ಷರನ್ನಾಗಿ ಮಾಡುವುದಾಗಿ ಅಧಿಕಾರದ ಅಮಿಷವೊಡ್ಡುತ್ತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣ ವ್ಯಾಪಾರೀಕರಣವಾಗುತ್ತಿದೆ ಎಂದು ಶಾಸಕರು ದೂರಿದರು. ಗ್ರಾಪಂ, ತಾಪಂ ಸೇರಿ ಸಮ್ಮಿಶ್ರ ಸರ್ಕಾರ ಇದ್ದಾಗಲೂ ವಿರೋಧ ಪಕ್ಷದ ಪ್ರತಿನಿಧಿಗಳಿಗೆ ಕೋಟಿ ಕೋಟಿ ಆಸೆ ತೋರಿಸಿ ನಿರೀಕ್ಷೆಗೂ ಮೀರಿ ಆಮಿಷವೊಡ್ಡಿದ್ದಾಯಿತು. ಈಗ ನಾವ್ಯಾರೂ ಊಹಿಸಲಾಗದಂಥದ್ದು ಇಲ್ಲಿನ ಜಿಪಂನಲ್ಲೂ ಮುಂದುವರಿದಿದೆ. ಸರ್ಕಾರವೂ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಮುಂದಿನ ದಿನಗಳಲ್ಲಿ ಮತದಾರರು ಬಿಜೆಪಿಗೆ ತಕ್ಕ ಉತ್ತರ ಕೊಡಬೇಕಾದ ಅವಶ್ಯವಿದೆ ಎಂದರು.

ಆ ಪಕ್ಷದ ಆಂತರಿಕ ವಿಚಾರ
ಅಧ್ಯಕ್ಷರ ಬದಲಾವಣೆ ಮಾಡುವುದು ಬಿಡುವುದು ಬಿಜೆಪಿಯ ಆಂತರಿಕ ವಿಚಾರ. ಅದನ್ನು ಬೀದಿಗೆ ತರಬಾರದು. ಜಿಪಂ ಸಭೆಗಳಲ್ಲಿ ಚರ್ಚಿಸುವುದೆಂದರೆ ಬಿಜೆಪಿಯವರ ತಳಮಟ್ಟದ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ ಅದು. ಜಿಪಂ ಸದನದಲ್ಲಿ 12 ವರ್ಷಕ್ಕೂ ಹೆಚ್ಚುಕಾಲ ಭಾಗಿಯಾಗಿದ್ದೇನೆ. ಬೇರೆ ಯಾವ ಜಿಪಂಗಳಲ್ಲೂ ಕೇಳದ ಘಟನೆ ಇತ್ತೀಚಿನ ದಿನಗಳಲ್ಲಿ ನಮ್ಮ ಜಿಪಂ ಸಭೆಗಳಲ್ಲಿ ನಡೆದು ಪ್ರತಿನಿಧಿಗಳಿಗೆ ಗೌರವವಿಲ್ಲದಂತಾಗಿದೆ. ಬಿಜೆಪಿ ನೇತೃತ್ವದಲ್ಲಿ ಜಿಪಂ ಅಸ್ತಿತ್ವಕ್ಕೆ ಬಂದ ನಂತರ ಮೊದಲಿಗೆ ಚೈತ್ರಶ್ರೀ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಕೆಲವೇ ತಿಂಗಳಲ್ಲಿ ರಾಜೀನಾಮೆ ಪ್ರಹಸನ ನಡೆದು ಅದಕ್ಕೆ ಸಮ್ಮತಿಸದ ಕಾರಣ ಅವರನ್ನು ಅಮಾನತು ಮಾಡಿತ್ತು. ಈಗ ಸುಜಾತ ಕೃಷ್ಣಪ್ಪ ಅವರಿಗೂ ಇದೇ ಸ್ಥಿತಿಯಾಯಿತು ಎಂದರು.

ಪರಿಶಿಷ್ಟ ಜಾತಿಗೆ ಮೀಸಲಿರುವ ಸ್ಥಾನದ ಅಧ್ಯಕ್ಷರ ಸಭೆಯಲ್ಲಿ 2019-20ನೇ ಕ್ರಿಯಾಯೋಜನೆ ಮಂಡನೆ ಮಾಡಿದರೆ ಹಾಜರಾತಿಗೆ ಸದಸ್ಯರು ಸಹಿ ಹಾಕಿ ಸ್ವಜಾತಿಯವರನ್ನೆ ಎತ್ತಿಕಟ್ಟಿ ಅಧ್ಯಕ್ಷರ ವಿರುದ್ಧ ಪ್ರಸ್ತಾಪಿಸುವಂತೆ ಕುಮ್ಮಕ್ಕು ನೀಡಿದ್ದಾರೆ. ಜಾತಿ ಒಡೆಯುವ ಕೆಲಸ ಮಾಡಿ ಮಾನಸಿಕ ಸ್ಥೈರ್ಯ ಕುಗ್ಗಿಸುವುದರ ಜತೆಗೆ ಮಹಿಳೆಗೆ ಅವಮಾನ ಮಾಡಿದ್ದು ಬೇಸರದ ವಿಚಾರ ಎಂದು ಹೇಳಿದರು.

ಗಂಭೀರ ಸಮಸ್ಯೆ ಬಗ್ಗೆ ಚರ್ಚಿಸಬೇಕಿತ್ತು
ಕರೊನಾ, ಅತಿವೃಷ್ಟಿ, ಅನಾವೃಷ್ಟಿ, ಕುಡಿಯುವ ನೀರು, ರಸ್ತೆ ಅಭಿವೃದ್ಧಿಯಂತಹ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕಿದ್ದ ಸಭೆಯಲ್ಲಿ ಪಕ್ಷದ ಆಂತರಿಕ ಚರ್ಚೆಗಳು ನಡೆದು ಆಡಳಿತ ಪಕ್ಷದವರೆ ಗೊಂದಲದ ವಾತಾವರಣ ಸೃಷ್ಟಿಸಿದ್ದು ದುರದೃಷ್ಟಕರ. ಪ್ರಜಾಪ್ರಭುತ್ವದಲ್ಲಿ ರಾಜಕಾರಣ ಬುಡಮೇಲಾಗಿದೆ. ಒತ್ತುವರಿ, ಹುಲಿಯೋಜನೆ, ಬಫರ್ ಜೋನ್‍ಗಳ ಸಾಧಕ ಬಾಧಕ ಚರ್ಚಿಸಿ ನಿರ್ಣಯಿಸಿ ಸರ್ಕಾರಕ್ಕೆ ಕಳುಹಿಸಲು ಅವಕಾಶ ನೀಡದೆ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದರು.

ರಾಜ್ಯದ ಇತಿಹಾಸದಲ್ಲೇ ಪ್ರಥಮ
ಜಿಪಂ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ ಜನತಂತ್ರ ವ್ಯವಸ್ಥೆಯಲ್ಲಿದ್ದೇವೆ ಎಂಬುದನ್ನು ಬಿಜೆಪಿ ಮರೆತಿದೆ. ಇದಕ್ಕೆ ಸೂತ್ರದಾರರು ಸ್ಥಳೀಯ ಶಾಸಕರು. ಏಕಕಾಲದಲ್ಲಿ ಒಂದು ಜಿಪಂ ಅವಧಿಯಲ್ಲಿ ಇಬ್ಬರು ಅಧ್ಯಕ್ಷರಿಗೆ ಅಮಾನತು ಆದೇಶ ನೀಡಿರುವ ಪ್ರಹಸನ ನಡೆದಿರುವುದು ರಾಜ್ಯದ ಇತಿಹಾಸದಲ್ಲೇ ಪ್ರಥಮ ಎಂದರು.

ಗ್ರಾಪಂ ಚುನಾವಣೆಗೆ ಸಿದ್ಧತೆ ನಡೆದಿದ್ದು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬ್ಲಾಕ್ ಹಂತದಲ್ಲಿ ತಯಾರಾಗಿದೆ. ಇಬ್ಬರು, ಮೂವರು ಆಕಾಂಕ್ಷಿಗಳಿರುವ ಕಡೆ ಒಬ್ಬರನ್ನೇ ಆರಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಆಡಳಿತದಲ್ಲಿ ರಾಜಕೀಯ ದೊಂಬರಾಟ
ಜಿಪಂ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಜಿಪಂ ಸಭೆಗಳಲ್ಲಿ ಪ್ರತಿವರ್ಷ ಆಗಸ್ಟ್‍ನಲ್ಲಿ ಕ್ರಿಯಾಯೋಜನೆಗೆ ಅನುಮೋದನೆ ನೀಡಿ ಮಾರ್ಚ್‍ನೊಳಗೆ ಕೆಲಸ ಪೂರ್ಣಗೊಳಿಸಿ ಹಣ ಪಾವತಿಸಲಾಗುತ್ತಿತ್ತು. ಈ ವರ್ಷದ ಕ್ರಿಯಾಯೋಜನೆ ಮಹತ್ವದ್ದಾಗಿತ್ತು. ಆದರೆ ಆಡಳಿತ ವ್ಯವಸ್ಥೆ ರಾಜಕೀಯ ದೊಂಬರಾಟಕ್ಕೆ ಸಿಲುಕಿದ ಕಾರಣ ಜಿಲ್ಲೆಯ ಜನರಿಗೆ ಇಂತಹ ಸಂಕಷ್ಟ ಎದುರಾಗಿದೆ. ಅಧಿಕಾರಿ, ಖಜಾನಾಧಿಕಾರಿಗಳ ನಿರ್ಲಕ್ಷ್ಯದಿಂದ 5 ಕೋಟಿ ಕ್ರಿಯಾ ಯೋಜನೆ ಕೈತಪ್ಪಿದೆ ಎಂದರು.

ಮಹಿಳೆ ಮೇಲೆ ಸೇಡೇಕೆ?
ವನಮಾಲ ದೇವರಾಜ್ ಮಾತನಾಡಿ, ಪುರುಷ ಸದಸ್ಯರು ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಗೆ ಅವಮಾನಿಸುವ ರೀತಿ ಸಭೆಯಲ್ಲಿ ವರ್ತಿಸಿದ್ದು ಸರಿಯಲ್ಲ. ಓರ್ವ ಮಹಿಳೆ ಮೇಲೆ ಬಿಜೆಪಿ ಸದಸ್ಯರಿಗೆ ಇಂತಹ ಸೇಡಿನ ರಾಜಕಾರಣವೇಕೆ ಎಂದು ಪ್ರಶ್ನಿಸಿದರು.

ಜಿಪಂ ಸದಸ್ಯರಾದ ಸದಾಶಿವ, ಪ್ರೇಮಾ ಮಂಜುನಾಥ್, ಲೋಲಾಕ್ಷಿಬಾಯಿ, ಲಕ್ಕಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net