ಅಸಮಾಧಾನ ಶಮನಕ್ಕೆ ಡಿಕೆಶಿ ಸರ್ಕಸ್

IMG-20200915-WA0135
Published on

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಎಲ್ಲ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಿಲ್ಲೆಯ ಪ್ರಮುಖರನ್ನು ಕರೆದು ಅಸಮಾಧಾನ ಶಮನಕ್ಕೆ ಮುಂದಾಗಿದ್ದಾರೆ.

ಸೋಮವಾರ ನಾಯಕ ಸಮುದಾಯದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರನ್ನು ಕರೆದು ಅಭಿಪ್ರಾಯ ಪಡೆದು ಚುನಾವಣೆಯಲ್ಲಿ ಗೆಲ್ಲುವ ತಂತ್ರಗಾರಿಕೆ ಬಗ್ಗೆ ತಿಳಿಸಿದ್ದ ಶಿವಕುಮಾರ್, ಮಂಗಳವಾರ ಕಾಡುಗೊಲ್ಲ ಸಮುದಾಯದ ಡಾ.ಸಾಸಲು ಸತೀಶ್ ಜತೆ ಉಪಚುನಾವಣೆ ಬಗ್ಗೆ ಚರ್ಚಿಸಿರುವುದು ಕುತೂಹಲ ಮೂಡಿಸಿದೆ.

ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಗಂಟೆಗೂ ಹೆಚ್ಚು ಕಾಲ ಸತೀಶ್ ಜತೆ ಮಾತುಕತೆ ನಡೆಸಿರುವ ಡಿಕೆಶಿ, ಶಿರಾ ಉಪಚುನಾವಣೆ ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ ನಡೆಯುತ್ತಿರುವ ಮೊದಲ ಚುನಾವಣೆಯಾಗಿದ್ದು ಗೆಲ್ಲಲೇಬೇಕು ಎಂಬ ಸಂದೇಶ ನೀಡಿದ್ದಾರೆ ಎನ್ನಲಾಗಿದೆ. ಟಿ.ಬಿ.ಜಯಚಂದ್ರ ಕಳೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪುತ್ರ ಟಿ.ಜೆ.ಸಂತೋಷ್‌ಗೆ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಕೊಡಿಸುವಾಗ ಕಾಡುಗೊಲ್ಲ ಸಮುದಾಯದ ಡಾ.ಸಾಸಲು ಸತೀಶ್‌ಗೆ ಟಿಕೆಟ್ ಕೈತಪ್ಪಿದ್ದು ಶಿರಾ ಕ್ಷೇತ್ರದ ಚುನಾವಣಾ ಲಿತಾಂಶದ ಮೇಲೆ ಪರಿಣಾಮ ಬೀರಿತ್ತು.

ಇದೇ ಕಾರಣಕ್ಕೆ ಈ ಉಪಚುನಾವಣೆಯಲ್ಲಿಯೂ ಅದೇ ಲಿತಾಂಶ ಪುನರಾವರ್ತನೆ ಆಗದಂತೆ ಕಾಡುಗೊಲ್ಲರಿಗೆ ಸಂದೇಶ ನೀಡುವ ನಿಟ್ಟಿನಲ್ಲಿ ಸತೀಶ್ ಜತೆ ಡಿ.ಕೆ.ಶಿವಕುಮಾರ್ ಅವರನ್ನು ಮಾತನಾಡಿಸಿ ಸಮಾಧಾನಿಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಯಾದವ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡದಿದ್ದ ಕಾರಣಕ್ಕೆ ತುಮಕೂರು ಹಾಗೂ ಚಿತ್ರದುರ್ಗ ಕ್ಷೇತ್ರಗಳಲ್ಲಿ ಹಿನ್ನಡೆಯಾಗಿದ್ದ್ದು, ಮುಂದಿನ ದಿನಗಳಲ್ಲಿ ನಿಮ್ಮ ಕೈಹಿಡಿಯುತ್ತೇವೆ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಡಿಕೆಶಿ ಸೂಚಿಸಿದ್ದಾರೆ ಎನ್ನಲಾಗಿದೆ.

ಬುಧವಾರ ಪ್ರಮುಖರ ಸಭೆ: ಶಿರಾ ಉಪಚುನಾವಣೆ ಬಗ್ಗೆ ಚರ್ಚಿಸಲು ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ ಪ್ರಮುಖರ ಸಭೆ ಕರೆಯಲಾಗಿದೆ. ಜಯಚಂದ್ರ ಜತೆ ಅಸಮಾಧಾನ ಹೊಂದಿರುವ ನಾಯಕರನ್ನು ಸಭೆಗೆ ಆಹ್ವಾನಿಸಿದ್ದು ಎಲ್ಲರನ್ನೂ ಸಮಾಧಾನಿಸಿ ಚುನಾವಣೆ ಎದುರಿಸುವ ಸವಾಲು ಕೆಪಿಸಿಸಿ ಅಧ್ಯಕ್ಷರ ಮುಂದಿದೆ.

ಜೆಡಿಎಸ್, ಬಿಜೆಪಿಯೂ ಸಕ್ರಿಯ: ಕ್ಷೇತ್ರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಲು ಜೆಡಿಎಸ್ ಹಾಗೂ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತ ಪಡೆದಂತೆಯೇ ಉಪಚುನಾವಣೆಯಲ್ಲಿಯೂ ಗೆಲುವಿಗೆ ಕಾರ್ಯತಂತ್ರ ರೂಪಿಸುವಲ್ಲಿ ಬಿಜೆಪಿ ಮುಖಂಡರು ನಿರತರಾಗಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರ ಕೂಡ ಆರಂಭಿಸಿದ್ದು ಅಭ್ಯರ್ಥಿ ೋಷಣೆಗೂ ಮುಂಚೆಯೇ ಗ್ರಾಮಗಳಿಗೆ ತೆರಳಿ ಪಕ್ಷ ಸೇರ್ಪಡೆ ಕಾರ್ಯವನ್ನು ಬಿರುಸುಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net