ಅಮಾನಿಕೆರೆ ಅಭಿವೃದ್ಧಿಗೆ ಯೋಜನೆ: ಶಾಸಕ ಜಿ.ಬಿ.ಜ್ಯೋತಿಗಣೇಶ್

15Tmk_Amanikere_Jyothiganesh
Published on

ತುಮಕೂರು: ಸ್ಮಾರ್ಟ್‌ಸಿಟಿ ಯೋಜನೆಯಡಿ 102 ಕೋಟಿ ರೂಪಾಯಿ ಅನುದಾನದಲ್ಲಿ ಅಮಾನಿಕೆರೆ ಅಭಿವೃದ್ಧಿಪಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರವಾಸಿ ಹಬ್ ಆಗಿ ರೂಪುಗೊಳ್ಳಲಿದೆ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ನಗರದ ಅಮಾನಿಕೆರೆಯಲ್ಲಿ ಸ್ಮಾರ್ಟ್‌ಸಿಟಿ ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮಂಗಳವಾರ ಸ್ಮಾರ್ಟ್‌ಸಿಟಿ, ಪಾಲಿಕೆ ಅಧಿಕಾರಿಗಳೊಂದಿಗೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಾನಿಕೆರೆ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದು, ಬುಗುಡನಹಳ್ಳಿ ಜಲಸಂಗ್ರಹಗಾರದಿಂದ ಪೈಪ್‌ಲೈನ್ ಮೂಲಕ ಅಮಾನಿಕೆರೆಗೆ ಹೇಮೆ ನೀರು ಹರಿಸಲು ಹಾಗೂ 3 ಶುದ್ಧೀಕರಣ ಘಟಕ ನಿರ್ಮಿಸಲು 52 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ ಎಂದರು.

ಅಮಾನಿಕೆರೆಯಲ್ಲಿ ಸ್ಮಾರ್ಟ್‌ಸಿಟಿ ವತಿಯಿಂದ ಕೆರೆ ಬಂಡ್ ಅಭಿವೃದ್ಧಿ, ಗ್ಲಾಸ್‌ಹೌಸ್ ನಿರ್ಮಿಸಲಾಗಿದೆ. ಅಮಾನಿಕೆರೆಯ ಆಗ್ನೇಯ ಮೂಲೆಯಲ್ಲಿ ಸೈನ್ಸ್ ಥೀಮ್ ಪಾರ್ಕ್ ನಿರ್ಮಾಣ ಮಾಡಲಿದ್ದು, ದೇಶದಲ್ಲೇ ಬಹುದೊಡ್ಡ ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ. ಕೆರೆ ಮಧ್ಯಭಾಗದಲ್ಲಿ ದ್ವೀಪಗಳು ಇರುವುದರಿಂದ ಬೋಟಿಂಗ್ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಬೋಟಿಂಗ್‌ನಿಂದ ಜಲಚರ ಪ್ರಾಣಿಗಳು, ಪಕ್ಷಿಗಳಿಗೆ ತೊಂದರೆಯಾಗಲಿದೆ ಎಂಬ ಮಾತು ತಜ್ಞರಿಂದ ಕೇಳಿ ಬಂದಿದೆ. ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಇಡೀ ನಗರಕ್ಕೆ ಬುಗುಡನಹಳ್ಳಿ ಜಲಾಸಂಗ್ರಹಾಗಾರದಿಂದಲೇ ಕುಡಿಯುವ ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗಂಗಸಂದ್ರ, ಮರಳೂರು ಕೆರೆಗೂ ಹೇಮಾವತಿ ನೀರು ಹರಿಸುವ ಯೋಜನೆ ಸಿದ್ಧವಾಗಿದ್ದು, ಈ ಕೆರೆಗಳಲ್ಲೂ ಸಹ ಶುದ್ಧೀಕರಣ ಘಟಕ ಸ್ಥಾಪಿಸಲು ಸ್ಮಾರ್ಟ್‌ಸಿಟಿಯಿಂದ 11 ಕೋಟಿ ರೂಪಾಯಿ ಮಂಜೂರಾಗಿದೆ ಎಂದರು. ಟೂಡಾ ಅಧ್ಯಕ್ಷ ಬಿ.ಎಸ್. ನಾಗೇಶ್, ಸ್ಮಾರ್ಟ್‌ಸಿಟಿ ಇಇ ಬಸವರಾಜೇಗೌಡ, ಎಇ ರಶ್ಮಿ, ಸಿದ್ದರಾಜು, ನೀರು ಸರಬರಾಜು ಮಂಡಳಿಯ ಚಂದ್ರಶೇಖರ್, ಜಯಪ್ರಕಾಶ್, ರಮೇಶ್ ಉಪಸ್ಥಿತರಿದ್ದರು.

ತುಮಕೂರು ಸಂತೆ ಸ್ಥಾಪನೆ : ಅಮಾನಿಕೆರೆ ಅಂಗಳದಲ್ಲಿನ ಗ್ಲಾಸ್‌ಹೌಸ್‌ಗೆ ಭಾರಿ ಬೇಡಿಕೆ ಇತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಈಗ ಗ್ಲಾಸ್‌ಹೌಸ್‌ಗೆ ಬೇಡಿಕೆ ಕುಸಿದಿದೆ. ಪರ್ಯಾಯವಾಗಿ ಗ್ಲಾಸ್‌ಹೌಸ್ ಪಕ್ಕದಲ್ಲಿರುವ ಮುಕ್ಕಾಲು ಎಕರೆ ಜಾಗದಲ್ಲಿ 1.75 ಕೋಟಿ ರೂ., ವೆಚ್ಚದಲ್ಲಿ ತುಮಕೂರು ಸಂತೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಜ್ಯೋತಿಗಣೇಶ್ ತಿಳಿಸಿದರು.

ಸಿಎಂರಿಂದ ಉದ್ಘಾಟನೆ: ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿಗಳು ಪೂರ್ಣಗೊಂಡರೆ ಭಾರತದ ಭೂಪಟದಲ್ಲಿ ತುಮಕೂರು ಗುರುತಿಸಿಕೊಳ್ಳಲಿದೆ. ನಗರದಲ್ಲಿ ಸ್ಮಾರ್ಟ್‌ಸಿಟಿ ವತಿಯಿಂದ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ಬಳಿಕ ಯಡಿಯೂರಪ್ಪ ಅವರಿಂದ ಉದ್ಘಾಟಿಸಲಾಗುವುದು ಎಂದು ಜ್ಯೋತಿಗಣೇಶ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net