

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿನ 6 ಕೆರೆಗಳಲ್ಲಿ ಸಾಹಸಿ ಪ್ರವಾಸೋದ್ಯಮ ಮತ್ತು ಜಲ ಕ್ರೀಡೆಗಳನ್ನು ಕೈಗೊಳ್ಳಲು ಚಿಂತಿಸಿದ್ದು ಪ್ರವಾಸಿಗರನ್ನು ಆಕರ್ಷಿಸುವಂತಾಗಲು ಜಿಲ್ಲಾಡಳಿತ ತ್ವರಿತ ಕ್ರಮದ ಅಗತ್ಯವಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಕಳೆದ 2018 ರಲ್ಲಿ ಮೂರು ದಿನಗಳ ಜಿಲ್ಲಾ ದಶಮಾನೋತ್ಸವದ ಆಚರಣೆಯ ವೇಳೆ ಹೊಸ ಪ್ರವಾಸೋದ್ಯಮ ಬೆಳವಣಿಗೆಗೆಯ ಹೊಸ ಯೋಜನೆಗಳು ಚರ್ಚೆಗ್ರಾಸವಾಗಿದ್ದವು. ಚಿಕ್ಕಬಳ್ಳಾಪುರ&ಗೌರಿಬಿದನೂರು ಮಾರ್ಗದ ರಸ್ತೆಯಲ್ಲಿರುವ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮೂರು ದಿನ ಜಲ ಸಾಹಸ ಕ್ರೀಡೆ ಕೈಗೊಳ್ಳಲಾಗಿತ್ತು. ಸ್ನೇಹಿತರು, ಕುಟುಂಬದವರ ಜತೆ ಸ್ವಯಂ ಬೋಟಿಂಗ್, ವಾಟರ್ ರೈಡಿಂಗ್ ಮಾಡಿ ಅನೇಕರು ಖುಷಿಪಟ್ಟಿದ್ದರು. ಆದರೆ, ಇದರ ಸೇವೆಯು ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿತ್ತು. ಇದನ್ನು ಮುಂದುವರೆಸಲಿಲ್ಲ. ಇದೀಗ ಜಿಲ್ಲೆಯ 6 ಕೆರೆಗಳಲ್ಲಿ ಸಾಹಸಿ ಪ್ರವಾಸೋದ್ಯಮ ಮತ್ತು ಜಲ ಕ್ರೀಡೆಗಳನ್ನು ಕೈಗೊಳ್ಳಲು ಚಿಂತಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ತಿಳಿಸಿದ್ದು ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯು ಯೋಜನೆ ರೂಪಿಸಿದೆ.
ಸಣ್ಣ ನೀರಾವರಿ ಇಲಾಖೆಯ ಕೆರೆಗಳಲ್ಲಿ ಮುಂಜಾಗ್ರತಾ ಕ್ರಮಗಳೊಂದಿಗೆ ಬೋಟಿಂಗ್, ವಿಂಡ್ ಸರ್ಫಿಂಗ್, ವಾಟರ್ ಚಾರ್ವಾಂಗ್, ಜೆಟ್ ಸೀಯಿಂಗ್, ಕಯಾಕಿಂಗ್ ಸೇರಿದಂತೆ ಜಲಸಾಹಸ ಕ್ರೀಡೆಗಳನ್ನು ಕೈಗೊಳ್ಳುವುದರ ಬಗ್ಗೆ ಚರ್ಚೆಯಾಗಿದೆ. ಕರ್ನಾಟಕ ಕೆರೆ ಮತ್ತು ಅಭಿವೃದ್ಧಿ ಪ್ರಾಧಿಕಾರವು ರಾಜ್ಯದ ಇತರ ಕೆರೆಗಳ ಮಾದರಿಯಲ್ಲಿ ಜಿಲ್ಲೆಯಲ್ಲೂ ಸುರತ ಕೆರೆಗಳಲ್ಲಿ ಮನರಂಜನಾ ಚಟುವಟಿಕೆ ನಿರ್ವಹಣೆಗೆ ಷರತ್ತಿಗೊಳಪಟ್ಟು ಅನುಮತಿ ನೀಡಿದೆ.
*ಪ್ರವಾಸೋದ್ಯಮ ಅಭಿವೃದ್ಧಿ ನಿರೀಕ್ಷೆ
ಬೆಂಗಳೂರಿಗೆ ಸಮೀಪವಿರುವ ಜಿಲ್ಲೆಯಲ್ಲಿ ನಂದಿ ಗಿರಿಧಾಮ, ರಂಗಸ್ಥಳ, ಸ್ಕಂದಗಿರಿ, ಆವುಲಬೆಟ್ಟ, ಮುದ್ದೇನಹಳ್ಳಿ ಸರ್ ಎಂ.ವಿ.ಸ್ಮಾರಕ, ಗುಮ್ಮನಾಯಕನಪಾಳ್ಯ, ಮುರುಗಮಲ್ಲಾ, ಗಡಿದಂ ಶ್ರೀ ವೆಂಕಟರಮಣಸ್ವಾಮಿ ಆಲಯ, ಸ್ಮುರದಗಿರಿ ಸೇರಿದಂತೆ ಆಕರ್ಷಕ ಹಲವು ಪ್ರವಾಸಿ ತಾಣಗಳಿವೆ. ಇಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಹೆೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಜನರಿಗೆ ಮತ್ತಷ್ಟು ಮುದ ನೀಡುವಂತಹ ವಾತಾವರಣ ನಿರ್ಮಿಸಬೇಕೆಂಬ ಅಭಿಪ್ರಾಯ ಹಿಂದಿನಿಂದಲೂ ಕೇಳಿ ಬರುತ್ತಿದೆ.