

ವಿಜಯವಾಣಿ ಸುದ್ದಿಜಾಲ ಕೋಟ
ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಶುಕ್ರವಾರ ಸಾಲಿಗ್ರಾಮ ಪಪಂ ಸಭಾಂಗಣದಲ್ಲಿ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿತು.
ಬ್ರಹ್ಮಾವರದಿಂದ ಕುಂದಾಪುರದವರೆಗೆ ಹಾದುಹೋಗಿರುವ ಪ್ರಸ್ತುತ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಭಾಗಗಳ ಕೃಷಿ ಭೂಮಿ ಸೇರಿದಂತೆ ಮನೆ ವಾಸ್ತವ್ಯವಿರುವ ಪ್ರದೇಶದಲ್ಲಿರುವ ಅನಧಿಕೃತ ವಿದ್ಯುತ್ ತಂತಿಗಳನ್ನು ತೆರವುಗೊಳಿಸಲು ಸದಸ್ಯ ರಾಜು ಪೂಜಾರಿ ಗಮನಸೆಳೆದರು. ರಸ್ತೆ ಸಂಪರ್ಕವಿಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವ ಕುರಿತು ಮೆಸ್ಕಾಂ ಇಂಜಿನಿಯರ್‌ಗಳಲ್ಲಿ ಮಾಹಿತಿ ಕೇಳಿದರು. ಈ ಬಗ್ಗೆ ಮೆಸ್ಕಾಂ ಶೀಘ್ರದಲ್ಲಿ ಹಳೆಯ ತಂತಿಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಿದೆ ಅಲ್ಲದೆ ವಿದ್ಯುತ್ ಸಂಪರ್ಕದ ಕುರಿತು ಮುಖ್ಯಾಧಿಕಾರಿಗಳ ಅವಗಾಹನೆಗೆ ಬಿಟ್ಟ ವಿಚಾರ ಎಂದು ಮೆಸ್ಕಾಂ ಪ್ರಶಾಂತ್ ಶೆಟ್ಟಿ ಉತ್ತರಿಸಿದರು.
ಪಟ್ಟಣ ಪಂಚಾಯಿತಿ ಒಳರಸ್ತೆ ಅಥವಾ ಹೆದ್ದಾರಿ ಸರ್ವೀಸ್ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿ ಮುಖ್ಯಾಧಿಕಾರಿ ಖಡಕ್ ಸೂಚನೆ ನೀಡಿದ್ದು, ಒಳಪೇಟೆಯಲ್ಲಿ ಜನಸಾಮಾನ್ಯರಿಗೆ ವಾಹನ ಸವಾರರಿಗೆ ಯಾವುದೇ ಸಮಸ್ಯೆ ಆಗದಂತೆ ಆಪರೇಷನ್ ಫುಟ್‌ಪಾತ್ ಯೋಜನೆ ಮಾಡಲಿದ್ದೇವೆ, ಇದಕ್ಕಾಗಿ ಪೊಲೀಸ್ ಇಲಾಖೆಯ ಸಹಕಾರ ಕೊರಿದರು.
ಇನ್ನುಳಿದಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಲಸೆ ಕಾರ್ಮಿಕರು ಹೆಚ್ಚಿರುವುದರಿಂದ ಇಂದಿರಾ ಕ್ಯಾಂಟೀನ್ ತೆರೆಯುವ ಬಗ್ಗೆ ಪ್ರಸ್ತಾಪಿಸಿದರು. ಈ ಬಗ್ಗೆ ಮುಖ್ಯಾಧಿಕಾರಿಗಳು ಸಂಬಂಧಿಸಿದ ಸ್ಥಳ ಗುರುತು ಪತ್ತೆಹಚ್ಚಿ ಮುಂದಿನ ಕ್ರಮದ ಭರವಸೆ ನೀಡಿದರು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಪಟ್ಟಣ ಪಂಚಾಯಿತಿ ಅಭಿವೃದ್ಧಿಯಾಗಬೇಕಾದರೆ ಒಳಚರಂಡಿ ಸಮಸ್ಯೆ ಸೇರಿದಂತೆ ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ರಾಜು ಪೂಜಾರಿ ಗಮನ ಸೆಳೆದರು. ಈ ಬಗ್ಗೆ ಮುಖ್ಯಾಧಿಕಾರಿಗಳು ಸ್ಥಳದ ಅವಶ್ಯಕತೆ, ಜನಸಾಮಾನ್ಯರ ಬೆಂಬಲದೊಂದಿಗೆ ಈ ಕಾರ್ಯ ಅನುಷ್ಠಾನಗೊಳ್ಳಬೇಕು ಎಂದರು.
ಅನಧಿಕೃತ ನಳ್ಳಿ, ರಾಷ್ಟ್ರೀಯ ಹೆದ್ದಾರಿ ಅಂಗಡಿ, ಟವರ್, ಜಾಹೀರಾತು ಫಲಕಗಳ ಬಗ್ಗೆ ಗುರುತು ಪತ್ತೆ ಹಚ್ಚಿ ತೆರಿಗೆ ವಸೂಲಾತಿ ಮಾಡಲಾಗುವುದು ಎಂದು ಮುಖ್ಯಾಧಿಕಾರಿ ಶೂನ್ಯವೇಳೆಯಲ್ಲಿ ಸಭೆಯಲ್ಲಿ ಪ್ರಸ್ತಾಪಿಸಿದರು.
ಪಟ್ಟಣ ಪಂಚಾಯಿತಿನಲ್ಲಿ ಯಾವುದೇ ಕೆಲಸಗಳು ಬ್ರೋಕರ್ ಮೂಲಕ ನಡೆಯುತ್ತದೆ. ಇಲ್ಲಿನ ಕೆಳ ಹಂತದ ಕಾರ್ಯ ನಿರ್ವಹಿಸುವವರು ಜನರ ಬಳಿ ಸ್ನೇಹದಿಂದ ವ್ಯವಹರಿಸುವಂತ್ತಾಗಲು ವಿಪಕ್ಷ ನಾಯಕ ಶ್ರೀನಿವಾಸ ಅಮೀನ್ ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಬಗ್ಗೆ ಖೇದ ವ್ಯಕ್ತಪಡಿಸಿದ ಮುಖ್ಯಾಧಿಕಾರಿ ಅಜೇಯ್, ಇಂದಿನಿಂದ ಪಟ್ಟಣ ಪಂಚಾಯಿತಿನಲ್ಲಿ ಜನಸ್ನೇಹಿ ಆಡಳಿತ ವ್ಯವಸ್ಥೆಯ ಜತೆಗೆ ಬ್ರೋಕರ್ ಮೂಲಕ ವ್ಯವಹರಿಸುವುದಕ್ಕೆ ಕಡಿವಾಣ ಹಾಕಲಾಗುದು ಅಲ್ಲದೆ ಸ್ಥಳದಲ್ಲೇ ಪಟ್ಟಣ ಪಂಚಾಯಿತಿ ಕೆಳವರ್ಗದ ಅಧಿಕಾರಿಗಳನ್ನು ಕರೆಸಿ ನಮ್ಮ ಪಂಚಾಯಿತಿನಲ್ಲಿ ಯಾವುದೇ ರೀತಿಯ ಪ್ರಕರಣ ಕಂಡು ಬಂದರೆ ನಿಮ್ಮ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರಗಿಸುತ್ತೇನೆ ಎಂದರು.
ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಘನ ಹಾಗೂ ದ್ರವ ತ್ಯಾಜ್ಯ ಘಟಕ ಜಡ್ಡು ಗಟ್ಟಿದೆ. ವೆಸ್ಟೇಜ್ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಘಟಕ ನಿರ್ಮಾಣಕ್ಕೆ ಉಳ್ತೂರು ಸ್ಥಳ ಖರೀದಿಸಿ ಪ್ರಯೋಜನಕ್ಕಿಲ್ಲದಾಗಿದೆ. ಪಾರಂಪಳ್ಳಿ ಘಟಕ ಅಭಿವೃದ್ಧಿಗೊಳಿಸುವ ಬಗ್ಗೆ ನಾವುಗಳು ಚರ್ಚಿಸುತ್ತಿದ್ದೇವೆ ಇದರ ಬಗ್ಗೆ ಸಂಸದ, ಶಾಸಕರ ಸಭೆ ಕರೆದು ಸಾಧಕ ಭಾದಕ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಿ ಪಟ್ಟಣ ಪಂಚಾಯಿತಿ ಒಕ್ಕೂರಲವಾಗಿ ಆಗ್ರಹಿಸಿತು. ಈ ಬಗ್ಗೆ ಮುಖ್ಯಾಧಿಕಾರಿ ಮಾಹಿತಿ ನೀಡಿ ನಾನು ಅಧಿಕಾರಿ ಸ್ವೀಕರಿಸಿ ಕೆಲ ದಿನಗಳಾಗಿದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಭರವಸೆ ನೀಡಿದರು.