

ಮಡಿಕೇರಿ: ಕೊಡಗಿನಲ್ಲಿ ಪ್ರವಾಸೋದ್ಯಮಿಗಳು ಒಗ್ಗಟ್ಟಿನಿಂದ ಪರಿಸರ ಸ್ನೇಹಿಯಾದ ವಿನೂತನ ಯೋಜನೆ ಜಾರಿಗೆ ಮುಂದಾದರೆ ಖಂಡಿತವಾಗಿಯೂ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉಜ್ವಲ ಭವಿಷ್ಯವಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಭಿಪ್ರಾಯಪಟ್ಟರು.
ನಗರದ ಹೊರವಲಯದಲ್ಲಿನ ವೈಲ್ಡರ್ ನೆಸ್ ರೆಸಾರ್ಟ್‌ನಲ್ಲಿ ಶುಕ್ರವಾರ ಕೂಗ್ ಹೋಟೇಲ್ಸ್, ರೆಸಾರ್ಟ್ ಅಸೋಸಿಯೇಷನ್‌ನ ನೂತನ ವೆಬ್ ಸೈಟ್, ಲಾಂಛನ ಅನಾವೋರಣಗೊಳಿಸಿ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾಧಿಕಾರಿ ಮಾತನಾಡಿದರು.
ಕುಶಾಲನಗರ-ಮಡಿಕೇರಿ ನಡುವಿನ ಹೆದ್ದಾರಿಯಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಖಾಸಗಿ ಜಾಗ ದೊರಕಿದರೆ, ಶೌಚಾಗೃಹ ಮಿನಿ ರೆಸ್ಟೋರೆಂಟ್ ವ್ಯವಸ್ತೆ ಕಲ್ಪಿಸಲು ಸರ್ಕಾರದಿಂದ ಸಾಧ್ಯವಿದೆ. ಸದ್ಯದಲ್ಲಿಯೇ ಮೈಸೂರು-ಕುಶಾಲನಗರ ನಡುವಿನ ಚತುಷ್ಪಥ ಹೆದ್ದಾರಿ ಕಾಮಗಾರಿ ಮುಕ್ತಾಯವಾದ ನಂತರ ಕುಶಾಲನಗರದಲ್ಲಿ ವಾಹನ ದಟ್ಟಣೆ ಇಳಿಮುಖವಾಗುವ ಸಾಧ್ಯತೆಯಿದೆ. ಮಡಿಕೇರಿಯಲ್ಲಿ ವಾಹನ ದಟ್ಟಣೆ ಮತ್ತು ವಾಹನ ನಿಲುಗಡೆ ಸಮಸ್ಯೆ ನಿವಾರಿಸಲು ಸೂಕ್ತ ಸ್ಥಳಗಳಲ್ಲಿ ಪ್ರವಾಸಿ ವಾಹನ ನಿಲುಗಡೆಗೊಳಿಸಿ ಅಂಥಹ ಸ್ಥಳದಿಂದ ಪ್ರವಾಸಿಗರನ್ನು ಪ್ರವಾಸಿ ಸಂಚಾರಿ ವಾಹನಗಳ ಮೂಲಕ ಪ್ರವಾಸಿ ತಾಣಗಳಿಗೆ ಕರೆದೊಯ್ಯುವ ಸೌಲಭ್ಯದತ್ತ ಚಿಂತನೆ ಹರಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಮಡಿಕೇರಿಯ ಕಾವೇರಿ ಕಲಾಕ್ಷೇತ್ರವನ್ನು ನೆಲಸಮಗೊಳಿಸಿ ಅಲ್ಲಿ ಬಹುಮಹಡಿ ವಾಹನ ನಿಲುಗಡೆಗೆ ಯೋಜನೆ ರೂಪಿಸಲಾಗಿದೆ. ಅಂತೆಯೇ ಗಾಂದಿ ಮೈದಾನದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಿಸಿ ಅಲ್ಲಿಯೂ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಯೋಜನೆ ರೂಪಿಸಲಾಗುತ್ತಿದೆ. ಕೊಡಗಿನ ನಿಸರ್ಗ ಸಂಪತ್ತು, ಶ್ರೀಮಂತ ಸಂಸ್ಕೃತಿಯನ್ನೂ ಪ್ರವಾಸೋದ್ಯಮಿಗಳು ಸುರಕ್ಷಿತವಾಗಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿಯೂ ಗಮನ ನೀಡಬೇಕೆಂದು ಅವರು ಕಿವಿಮಾತು ಹೇಳಿದರು.
ಕೊಡಗಿನಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಸಂಬಂದಿತ ಯಾವುದೇ ರೀತಿಯ ಸಲಹೆಗಳಿದ್ದರೂ ಜಿಲ್ಲಾಡಳಿತಕ್ಕೆ ನೀಡಿ ಎಂದು ಮನವಿ ಮಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿನ ಪ್ರವಾಸೋದ್ಯಮಿಗಳು ಪರಿಸರ ಸಂರಕ್ಷಣೆಯೊಂದಿಗೆ ಹೊಣೆಯರಿತ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು. ಕಳಪೆ ಗುಣಮಟ್ಟದ, ನಕಲಿ ಉತ್ಪನ್ನಗಳು ಕೊಡಗು ಹೆಸರಿನಲ್ಲಿ ಮಾರಾಟವಾಗುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಪ್ರತ್ಯೇಕವಾದ ಕೊಡಗು ಬ್ರಾಂಡ್ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡುವ ನಿಟ್ಟಿನಲ್ಲಿಯೂ ಗಮನ ನೀಡಿ ಎಂದು ಸಲಹೆ ನೀಡಿದರು.
ಕೂರ್ಗ್ ಹೋಟೇಲ್ಸ್, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಮಾತನಾಡಿ, ಭವಿಷ್ಯದಲ್ಲಿ ಕೊಡಗಿನಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಸಂಬಂಧಿಸಿದಂತೆ ಸಾಕಷ್ಟು ನೂತನ ಯೋಜನೆ ರೂಪಿಸಲಾಗಿದೆ. ರೆಸಾರ್ಟ್, ಹೋಟೇಲ್ ನವರು ಕೊಡಗಿನಲ್ಲಿ ಉದ್ಯಮ ವಹಿವಾಟು ನಡೆಸುವ ಸಂದರ್ಭ ಸ್ಥಳೀಯರ ವಿಶ್ವಾಸ ಗಳಿಸುವುದು ಅತ್ಯಗತ್ಯ ಎಂದು ಕರೆ ನೀಡಿದರು.
ಪ್ರವಾಸೋದ್ಯಮಿ ಮತ್ತು ಸಂಘದ ಗೌರವ ಸಲಹೆಗಾರ ಜಿ.ಚಿದ್ವಿಲಾಸ್ ಮಾತನಾಡಿ, ಕುಶಾಲನಗರಕ್ಕೆ ರೈಲ್ವೆ ಮಾರ್ಗ ಸಂಪರ್ಕ ಯೋಜನೆ ದಶಕಗಳಿಂದ ವಿಳಂಭವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಬೇಕು. ಕೊಡಗಿನಲ್ಲಿ ಹಲವಾರು ತಾಣಗಳಿದ್ದು, ಇವುಗಳಿಗೆ ಕಾಯಕಲ್ಪ ನೀಡಿದ್ದಲ್ಲಿ, ಈಗಿರುವ ಪ್ರವಾಸಿ ತಾಣಗಳಲ್ಲಿ ಪ್ರವಾಸಿ ದಟ್ಟಣೆ ಕಡಮೆಯಾಗಲು ಸಾಧ್ಯವಿದೆ ಎಂದು ಸಲಹೆ ನೀಡಿದರು.
ಪ್ರವಾಸೋದ್ಯಮಿ ಕೊಲ್ಲೀರ ಧರ್ಮಜ, ಮೋಹನ್ ದಾಸ್, ಜಯಚಿಣ್ಣಪ್ಪ, ಜಗದೀಶ್ ಇತರರು ಮಾತನಾಡಿದರು. ಪ್ರವಾಸೋದ್ಯಮಿ ಮದನ್ ರೂಪಿಸಿದ ಕೂರ್ಗ್ ಹೋಟೇಲ್ಸ್, ರೆಸಾರ್ಟ್ ಅಸೋಸಿಯೇಷನ್‌ನ ನೂತನ ವೆಬ್ ಸೈಟ್‌ನ್ನು ಇದೇ ಸಂದರ್ಭ ಜಿಲ್ಲಾಧಿಕಾರಿ ಅನಾವರಣಗೊಳಿಸಿದರು. ಇದೇ ಸಂದರ್ಭ ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರಸಭೆಯ ಪೌರಾಯುಕ್ತ ರಮೇಶ್, ಪ್ರವಾಸೋದ್ಯಮ ಇಲಾಖೆಯ ಪ್ರಬಾರ ಸಹಾಯಕ ನಿರ್ದೇಶಕ ಬಸಪ್ಪ, ಅಸೋಸಿಯೇಷನ್ ಖಜಾಂಜಿ ಸಾಗರ್ ವೇದಿಕೆಯಲ್ಲಿದ್ದರು. ಜಿಲ್ಲೆಯಾದ್ಯಂತಲಿನ ರೆಸಾರ್ಟ್, ಹೊಟೇಲ್, ರೆಸ್ಟೋರೆಂಡ್ ಉದ್ಯಮಿಗಳು ಪಾಲ್ಗೊಂಡಿದ್ದರು.