ಶಾಶ್ವತ ಶಾಲಾ ಕಟ್ಟಡ ನಿರ್ಮಾಣಕ್ಕೆ ಯೋಜನೆ

Madhu bangarappa
Published on

ಶಿರಸಿ: ಕಲ್ಯಾಣ ಕರ್ನಾಟಕ ಭಾಗ, ಅನುದಾನಿತ ಶಾಲೆ ಒಳಗೊಂಡು ಇನ್ನೂ 15ಸಾವಿರ ಶಿಕ್ಷಕರ ಬೇಡಿಕೆಯನ್ನು ಮುಖ್ಯಮಂತ್ರಿಗೆ ನೀಡಿದ್ದೇವೆ. ಅದರಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಅಗತ್ಯವಿದೆ. ಆಗ ಇಲಾಖೆ ಒಂದು ಹಂತಕ್ಕೆ ಮೇಲ್ದರ್ಜೆಗೆ ಬರುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.ಬಾರಿ ಮಳೆಯಿಂದ ಮಲೆನಾಡಿನ ಶಾಲಾ ಕಟ್ಟಡಗಳಿಗೆ ದೊಡ್ಡ ಮಟ್ಟದ ಹಾನಿಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಂತಹ ಕಟ್ಟಡಗಳನ್ನು ದುರಸ್ತಿ ಮಾಡುವುದಕ್ಕಿಂತ ಹೆಚ್ಚಾಗಿ ಶಾಶ್ವತ ಕಟ್ಟಡಗಳ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತೇವೆ ಎಂದರು.

ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮುಂತಾದ ಮಲೆನಾಡಿನ ಪ್ರದೇಶದಲ್ಲಿ ಮಳೆಯಿಂದ ಶಾಲಾ ಕೊಠಡಿಗಳ ಮರು ನಿರ್ಮಾಣಕ್ಕೆ ಒಂದೇ ಬಾರಿ ಅನುದಾನ ಸಾಕಾಗುವುದಿಲ್ಲ. ಈ ಕುರಿತೂ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುತ್ತೇನೆ ಎಂದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಗೆ ಮೂರು ಪರೀಕ್ಷೆಗಳ ಅವಕಾಶ ಕಲ್ಪಿಸಿದ್ದರಿಂದ ಪಿಯುಸಿಯಲ್ಲಿ 80ಸಾವಿರ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ 60ಸಾವಿರ ಮಕ್ಕಳು ಪಾಸಾಗುವಂತಾಯಿತು. ಇದರಿಂದ ತುಂಬಾ ಅನುಕೂಲವಾಯಿತು. ಆತ್ಮವಿಶ್ವಾಸ ಬಂತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ ಎಂದರು.

ಮಕ್ಕಳು ಶಾಲೆಗಳಿಗೆ ಬಂದರೆ ಶಿಕ್ಷಕರಿಲ್ಲ ಎನ್ನುವಂತಾಗಬಾರದು ಎಂದು ಪ್ರಾರಂಭಿಕ ಹಂತದಲ್ಲೇ 43ಸಾವಿರ ಅತಿಥಿ ಶಿಕ್ಷಕರನ್ನು ನೀಡಿದ್ದೇವೆ. 13500 ಕಾಯಂ ಶಿಕ್ಷಕರ ಹುದ್ದೆ ತುಂಬಿದ್ದೇವೆ. 5800 ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಸಿದ್ದೇವೆ. ಕಲಿಕೆಯಲ್ಲಿ ಹಿಂದೆ ಇರುವವರಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಬಿಸಿಯೂಟ, ಹಾಲು ಸೌಲಭ್ಯ, ಮಲೆನಾಡಿನ ಭಾಗದಲ್ಲಿ ಕಾಲು ಸಂಕ ಹೆಚ್ಚು ಬಂದಿದೆ. ಮತ್ತೆ ಅವಶ್ಯಕತೆಯಿದ್ದರೆ ಒದಗಿಸುತ್ತೇವೆ. ವಿದ್ಯಾರ್ಥಿಗಳ ಓಡಾಟಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದರು.

ಮುಂದಿನ ಕೆಲವು ವರ್ಷಗಳಲ್ಲಿ ಎರಡು ಗ್ರಾಪಂಗಳಿಗೆ ಒಂದು ಪಬ್ಲಿಕ್ ಶಾಲೆ ನಿರ್ಮಿಸುವ ಚಿಂತನೆಯಿದೆ. ಅದನ್ನು ಮಾಡಿದರೆ ಊರಿಗೊಂದು ಶಾಲೆ ಎಂದು ಹಿಂದೆ ಇದ್ದಂತೆ ಆಗುತ್ತದೆ. ಸುತ್ತಲಿನ ಮಕ್ಕಳು ಬರುವುದಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಇಲಾಖೆಗೂ ಅನುಕೂಲವಾಗುತ್ತದೆ ಎಂದರು.

ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಡಿಡಿಪಿಐ ಬಸವರಾಜ ಮುಂತಾದವರು ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net