ತುಂಗೆಯ ಶುದ್ಧೀಕರಣಕ್ಕೆ ಯೋಜನೆ: ಎಂಎಲ್‌ಎ ಚೆನ್ನಿ

tunga
ತುಂಗಾ ನದಿಗೆ ಶಾಸಕ ಎಸ್.ಎನ್.ಚನ್ನಬಸಪ್ಪ ಬಾಗಿನ ಸಮರ್ಪಿಸಿದರು. ಗಿರೀಶ್ ಪಟೇಲ್, ಡಿ.ಮೋಹನ್ ರೆಡ್ಡಿ, ಅನಿತಾ ರವಿಶಂಕರ್, ಗೀತಾ ರವೀಂದ್ರ, ಜಗದೀಶ್ ಇತರರಿದ್ದರು.
Published on

ಶಿವಮೊಗ್ಗ: ತುಂಗೆ ನಮ್ಮ ಜೀವನಾಡಿ, ಮಲೆನಾಡಿಗರಿಗೆ ಸದಾ ಕಾಲ ರಕ್ಷಣೆ ನೀಡುವ ಜೀವನದಿ. ನಮ್ಮ ಸಂಸ್ಕೃತಿ, ಧರ್ಮದ ಪ್ರತೀಕವಾಗಿ ಭಕ್ತಿ ಪೂರ್ವಕವಾಗಿ ಪೂಜೆ ಮಾಡಿ ತುಂಬಿದ ತುಂಗಿಗೆ ಬಾಗಿನ ಅರ್ಪಿಸಿರುವುದು ತೃಪ್ತಭಾವ ಮೂಡಿಸಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಬುಧವಾರ ತುಂಗಾ ನದಿಗೆ ಬಾಗಿನ ಸಮರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗೆಯ ಶುದ್ಧೀಕರಣಕ್ಕೆ ಬೇಕಾದ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ನಗರ ಮಟ್ಟದಲ್ಲಿ ಈಗಾಗಲೇ ಈ ನಿಟ್ಟಿನಲ್ಲಿ ಅನೇಕ ಕಾರ್ಯಗಳು ಆಗಿವೆ. ಆದರೆ ನಗರದ ಹೊರಗೆ ಕೂಡ ತುಂಗೆ ಶುದ್ಧವಾಗಿರುವ ಕಾರ್ಯಕ್ರಮ ರೂಪಿಸಬೇಕಿದೆ ಎಂದರು.
ನಟ ಅನಿರುದ್ಧ್ ನನ್ನನ್ನು ಭೇಟಿಯಾಗಿ ಶುದ್ಧ ತುಂಗೆಗಾಗಿ ಅವರ ಪರಿಕಲ್ಪನೆಯನ್ನು ವಿವರಿಸಿದ್ದಾರೆ. ಶೃಂಗೇರಿಯಿಂದ ಮಂತ್ರಾಲಯದವರೆಗೆ ಪಾದಯಾತ್ರೆ ಮಾಡಿ ತುಂಗೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಅವರಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದೇನೆ ಎಂದು ತಿಳಿಸಿದರು.
ಶಿವಮೊಗ್ಗ ನಗರದೊಳಗೆ ಹಾದುಹೋಗುವ ಸುಮಾರು 11ಕಿ.ಮೀ ತುಂಗಾ ಎಡದಂಡೆ ಕಾಲುವೆಯ ಎರಡು ಬದಿಯ ಖಾಲಿ ಜಾಗವನ್ನು ಕೆಲವರು ಅತಿಕ್ರಮಣ ಮಾಡುತ್ತಿದ್ದಾರೆ. ಹೀಗಾಗಿ ನಾಲೆಯ ಎರಡೂ ಕಡೆಗಳಿಗೆ ತಂತಿ ಬೇಲಿ ನಿರ್ಮಿಸಲು ಅನುದಾನ ನೀಡುವಂತೆ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿರುವುದಾಗಿ ಹೇಳಿದರು.
ಚನ್ನಬಸಪ್ಪ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಬಿಜೆಪಿ ವಿಭಾಗೀಯ ಪ್ರಭಾರಿ ಗಿರೀಶ್ ಪಟೇಲ್, ನಗರಾಧ್ಯಕ್ಷ ಡಿ.ಮೋಹನ್ ರೆಡ್ಡಿ, ಮಾಜಿ ಅಧ್ಯಕ್ಷ ಜಗದೀಶ್, ಸೂಡಾ ಮಾಜಿ ಅಧ್ಯಕ್ಷ ನಾಗರಾಜ್, ಪಾಲಿಕೆ ಮಾಜಿ ಸದಸ್ಯರಾದ ಅನಿತಾ ರವಿಶಂಕರ್, ಪ್ರಭಾಕರ್, ಸ್ಲಂಬೋರ್ಡ್ ಮಾಜಿ ನಿರ್ದೇಶಕಿ ಗೀತಾ ರವೀಂದ್ರ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net