

ಬೆಂಗಳೂರು: ವಿಶ್ವದ ಅತಿ ಹೆಚ್ಚು 39 ಮಾಲಿನ್ಯ ನಗರಗಳ ಪೈಕಿ ಬೆಂಗಳೂರು ಕೂಡಾ ಒಂದಾಗಿದ್ದು, ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಉತ್ತಮ ಯೋಜನೆಗಳನ್ನು ರೂಪಿಸಿಕೊಂಡು ಅನುಷ್ಠಾನಕ್ಕೆ ತರಬೇಕಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಆಡಳಿತಗಾರ ಎಸ್.ಆರ್. ಉಮಾಶಂಕರ್ ತಿಳಿಸಿದರು.
ವಿಕಾಸಸೌಧದಲ್ಲಿ ನಡೆದ ಕಡಿಮೆ ಇಂಗಾಲದ ಕಡೆಗೆ, ಒಳಗೊಳ್ಳುವಿಕೆ, ಮತ್ತು ವಾಸಯೋಗ್ಯ ಬೆಂಗಳೂರು ಕುರಿತ ಕಾರ್ಯಗಾರ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದೊಂದಿಗೆ ನಾಗರಿಕರು ಕೈಜೋಡಿಸಿದರೆ ಮಾತ್ರ ನಗರದಲ್ಲಿ ವಾಯುಮಾಲಿನ್ಯ ನಿಯಂತ್ರಿಸಬಹುದು ಎಂದು ಪ್ರತಿಪಾದಿಸಿದರು.
ನಗರದಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ನಾಗರಿಕರು ಖಾಸಗಿ ವಾಹನಗಳನ್ನು ಬಿಟ್ಟು, ಸಮೂಹ ಸಾರಿಗೆ ವಾಹನಗಳನ್ನು ಹೆಚ್ಚಾಗಿಬಳಸಿಕೊಳ್ಳಬೇಕು. ಇದರಿಂದ ಸಹಜವಾಗಿಯೇ ವಾಯುಮಾಲಿನ್ಯ ಕ್ರಮೇಣ ಕಡಿಮೆಯಾಗಲಿದೆ ಎಂದರು.
ಸರ್ಕಾರದ ನಿಯಮ ಪಾಲಿಸಿರಿ:
ನಾಗರಿಕರು ಜವಾಬ್ದಾರಿಯಿಂದ ವರ್ತಿಸದರೆ ಮಾತ್ರ ಇರುವ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರ ಸಹಕಾರದಿಂದ ಉತ್ತಮ ನಗರವನ್ನು ರೂಪಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರದ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಹಾವಾಮಾನದಲ್ಲಿ ತ್ವರಿತವಾಗಿ ಬದಲಾವಣೆಗಳನ್ನು ಕಾಣಬಹುದು ಎಂದು ಉಮಾಶಂಕರ್ ತಿಳಿಸಿದರು.
ನಾಗರಿಕರ ಪಾತ್ರ ಪ್ರಮುಖ:
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ನಗರದಲ್ಲಿ ಹೆಚ್ಚಾಗಿ ಗಿಡಗಳನ್ನು ನಡುವುದು, ರಾಜಕಾಲುವೆ ವ್ಯವಸ್ಥೆ ಸರಿಪಡಿಸುವುದು, ಸಂಚಾರ ದಟ್ಟಣೆ ನಿಯಂತ್ರಿಸುವುದು, ಘನತ್ಯಾಜ್ಯ ವ್ಯವಸ್ಥೆ ಸರಿಪಡಿಸುವುದು ಸೇರಿ ಇನ್ನಿತರ ವಿಷಯಗಳಲ್ಲಿ ನಾಗರಿಕರ ಪಾತ್ರ ಅತ್ಯಂತ ಮಹತ್ವ ಪಡೆದಿದೆ. ಆದ್ದರಿಂದ ಸಾರ್ವಜನಿಕರು ನಮ್ಮೊಂದಿಗೆ ಕೈ ಜೋಡಿಸಿದರೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ ಎಂದರು.
2022ರಲ್ಲಿ ಪ್ರವಾಹ, 2023ರಲ್ಲಿ ಬರಗಾಲ ಹಾಗೂ 2024ರಲ್ಲಿ ನೀರಿನ ಕೊರತೆ ಮತ್ತು ಬಿಸಿಲಿನಿಂದ ಬೆಂಗಳೂರು ಹವಾಮಾನ ಬದಲಾವಣೆಯನ್ನು ಎದುರಿಸಿದೆ. ಅದನ್ನು ಪೂರ್ವಭಾವಿಯಾಗಿ ಪರಿಹರಿಸಬೇಕು. ಅಂತರ್ಜಲ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ಆದ್ದರಿಂದ ಎಲ್ಲರೂ ಸ್ವಯಂಪ್ರೇರಿತವಾಗಿ ಸಂಸ್ಥೆಗಳು, ಅಪಾರ್ಟ್‌ಮೆಂಟ್‌ಗಳು, ಮನೆಗಳಲ್ಲಿ ಮಳೆನೀರು ಕೊಯ್ಲು ಅಳವಡಿಸಿಕೊಳ್ಳಬೇಕು. ಇದರಿಂದ ಅಂತರ್ಜಲದ ಮಟ್ಟ ಹೆಚ್ಚಾಗಲಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿಯ ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆಯ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್, ಪಾಲಿಕೆ ಅಧಿಕಾರಿಗಳು, ಡಬ್ಲ್ಯುಆರ್‌ಐ ಇಂಡಿಯಾ ಪ್ರತಿನಿಧಿಗಳು, ಪಾಲುದಾರರು ಸೇರಿ ಇನ್ನಿತರು ಹಾಜರಿದ್ದರು.