ಯೋಜನೆ ಸಮರ್ಪಕ ಜಾರಿಗೆ ಶ್ರಮಿಸಿ

nrega
ಹರಪನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕೂಸಿನ ಮನೆಯ ಮಕ್ಕಳನ್ನು ಆರೈಕೆ ಮಾಡುವವರಿಗೆ ತರಬೇತಿ ಕಾರ್ಯಾಗಾರವನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ಪ್ರಕಾಶ ಉದ್ಘಾಟಿಸಿದರು.ತಾಲೂಕು ನರೇಗಾ ಸಹಾಯಕ ನಿರ್ದೇಶಕ ಯು.ಎಚ್.ಸೋಮಶೇಖರ್, ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್, ಸಿಡಿಪಿಒ ಇಲಾಖೆಯ ರೇಣುಕಾ ಜುಟ್ಲೆ, ಹೇಮಾ ಇದ್ದರು.
Published on

ಹರಪನಹಳ್ಳಿ: ಕೂಸಿನಮನೆಯ ಮಕ್ಕಳ ಆರೈಕೆ ಎಂದರೆ ಬರೀ ಊಟ, ಪಾಠ ಮಾತ್ರವಲ್ಲ. ಯಾವುದೇ ತಾರತಮ್ಯವಿಲ್ಲದೆ ಮನೆಯ ಮಕ್ಕಳಂತೆ ನೋಡಿಕೊಳ್ಳುವ ಜವಾಬ್ದಾರಿ ಆರೈಕೆದಾರರ ಮೇಲಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ಪ್ರಕಾಶ ತಿಳಿಸಿದರು.

ಕಾರ್ಯಾಗಾರ

ಪಟ್ಟಣದ ತಾಪಂ ಆವರಣದ ಸಾಮರ್ಥ್ಯ ಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಕೂಸಿನ ಮನೆಯ ಮಕ್ಕಳನ್ನು ಆರೈಕೆ ಮಾಡುವವರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕೂಸಿನಮನೆ ಸ್ಥಾಪನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆಯ ದೊಡ್ಡ ಮತ್ತು ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಮಕ್ಕಳ ಬೌದ್ಧಿಕ, ಮಾನಸಿಕ, ಆರೋಗ್ಯಯುತವಾಗಿ ನೋಡಿಕೊಳ್ಳುವುದು ಆರೈಕೆದಾರರ ಮೇಲೆ ಇದೆ. 37 ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸುಸಜ್ಜಿತ ಕಟ್ಟಡಗಳನ್ನು ಆಯ್ಕೆ ಮಾಡಿ, ಕೂಸಿನ ಮನೆ ಆರಂಭಿಸಲಾಗುವುದು. ಪ್ರತಿ ಪಂಚಾಯಿತಿಯ ಒಂದು ಕಡೆ ಕೂಸಿನ ಮನೆ ಆರಂಭ ಮಾಡಲಾಗುವುದು. ಎಲ್ಲಿ ಕೂಸಿನ ಮನೆ ಇರುತ್ತದೆಯೋ ಅದೇ ಗ್ರಾಮದಲ್ಲಿನ ಅರ್ಹ ನರೇಗಾದ ಇಬ್ಬರು ಕೂಲಿ ಕಾರ್ಮಿಕರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದವರು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದರು.

ತಾಲೂಕು ನರೇಗಾ ಸಹಾಯಕ ನಿರ್ದೇಶಕ ಯು.ಎಚ್.ಸೋಮಶೇಖರ್ ಮಾತನಾಡಿ, ಎಲ್ಲ ಶಿಬಿರಾರ್ಥಿಗಳು ಸರಿಯಾದ ರೀತಿಯಲ್ಲಿ ತರಬೇತಿ ಪಡೆಯಬೇಕು. ಮಾನವ ದಿನಗಳು ಮುಗಿದ ಬಳಿಕ ಉಳಿದ ಅರ್ಹ ಕೂಲಿ ಕಾರ್ಮಿಕರಿಗೂ ಈ ಅವಕಾಶ ಇದೆ. ಆದ್ದರಿಂದ ಶಿಬಿರಾರ್ಥಿಗಳು ನಿರ್ಲಕ್ಷ್ಯ ತೋರದೆ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನು ಆರೈಕೆ ಮಾಡಬೇಕು ಎಂದರು.

ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್ ಮಾತನಾಡಿ, ತರಬೇತಿಯಲ್ಲಿ ಪಾಲ್ಗೊಂಡ ಎಲ್ಲರೂ ಹಳ್ಳಿಗಳಿಂದ ಬಂದವರು ಜತೆಗೆ ವಿದ್ಯಾವಂತರೆ. ಹೀಗಾಗಿ ಮಕ್ಕಳನ್ನು ಆರೈಕೆ ಮಾಡುವಾಗ ತಮ್ಮ ಮಕ್ಕಳಂತೆ ನೋಡಿಕೊಂಡು ಸರ್ಕಾರ ನೀಡುವ ಆಹಾರ ನೀಡಿ ಎಲ್ಲ ಮಕ್ಕಳು ಪೌಷ್ಟಿಕವಾಗಿ ಬೆಳೆಯಬೇಕು ಎಂದರು.

ಐಇಸಿ ಸಂಯೋಜಕ ಕೆ.ವಸಿಗೇರಪ್ಪ, ತರಬೇತುದಾರರಾದ ಸಿಡಿಪಿಒ ಇಲಾಖೆಯ ರೇಣುಕಾ ಜುಟ್ಲೆ, ಹೇಮಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net