ಆನೇಕಲ್ ತಾಲೂಕು ಕಚೇರಿಯಲ್ಲಿ ಬ್ರೋಕರ್‌ಗಳ ಹಾವಳಿ

anekal
Published on

ನವೀನ್ ಶೆಟ್ಟಿ ಕೆರಾಡಿ ಆನೇಕಲ್

ಆನೇಕಲ್ ತಾಲೂಕು ಕಚೇರಿಯಲ್ಲಿ ಬ್ರೋಕರ್‌ಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರು ಕೆಲಸ ಕಾರ್ಯಗಳಾಗದೆ ಹೈರಾಣಾಗಿದ್ದಾರೆ.

ಇಲ್ಲಿಗೆ ಬರುವ ರೈತರು ಹಾಗೂ ಸಾಮಾನ್ಯ ಜನರು ಯಾವುದೇ ಕೆಲಸ ಮಾಡಿಕೊಳ್ಳೋಕೆ ಸಾಧ್ಯವಾಗದೆ, ಬ್ರೋಕರ್‌ಗಳ ಮೊರೆ ಹೋದರಷ್ಟೇ ಕೆಲಸ ಎಂಬಂತಾಗಿದೆ,

ತಾಲೂಕು ಕಚೇರಿ ಎಂದರೆ ತಾಲೂಕಿನ ಸಾರ್ವಜನಿಕರಿಗೆ ಏನೆ ಸಮಸ್ಯೆ ಬಂದರೂ ಅಲ್ಲಿ ಪರಿಹಾರವಾಗುತ್ತೆ ಎಂಬ ಆಶಾ ಭಾವನೆ ಇರುತ್ತೆ, ಆದರೆ ಇಲ್ಲಿನ ತಾಲೂಕು ಕಚೇರಿಯಲ್ಲಿ ಹಣ ಇದ್ದರಷ್ಟೇ ಕೆಲಸ ಎಂಬಂತಾಗಿದೆ.

ಕಚೇರಿಯಲ್ಲಿನ ಕಡತಗಳು ಬೂಸ್ಟ್ ಹಿಡಿದ ರೀತಿಯಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದು, ಸಲ್ಲಿಕೆಯಾಗುವ ಸಾರ್ವಜನಿಕರ ಅರ್ಜಿಗಳು ಯಾವ ಮೂಲೆ ಸೇರುತ್ತಿಯೋ ಎಂಬ ಪ್ರಶ್ನೆ ಮೂಡಿದೆ.

ಸ್ವಚ್ಛತೆ ಮರೀಚಿಕೆಯಾಗಿದ್ದು, ಇಲ್ಲಿ ಕುಡಿಯಲು ನೀರು ಸಿಗುತ್ತಿಲ್ಲ. ವೃದ್ಧರು, ಮಹಿಳೆಯರಿಗೆ ಕನಿಷ್ಠ ಪಕ್ಷ ಶೌಚಗೃಹದ ವ್ಯವಸ್ಥೆ ಇಲ್ಲ. ಈ ಸಮಸ್ಯೆಗಳ ಬಗ್ಗೆ ತಾಲೂಕು ದಂಡಾಧಿಕಾರಿಗೆ ಹೇಳಬೇಕು ಎಂದುಕೊಂಡು ಹೋದರೆ ದಂಡಾಧಿಕಾರಿಯೇ ಸರಿಯಾಗಿ ಕಚೇರಿಗೆ ಬರುವುದಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿವೆ,

ಇಲ್ಲಿನ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಅಧಿಕಾರಿಗಳ ವರ್ತನೆಗೆ ಜನ ಹೈರಾಣಾಗಿದ್ದಾರೆ. ಅಲ್ಲದೆ ಒಂದು ದಾಖಲಾತಿ ತೆಗೆದುಕೊಳ್ಳೋಕೆ ಅಭಿಲೇಕಾಲಯ ಹಾಗೂ ರೆಕಾರ್ಡ್ ರೂಂನಲ್ಲಿ ಹಣ ಕೊಟ್ಟರಷ್ಟೇ ಕೆಲಸ ಎಂಬಂತಾಗಿದೆ.

ಪ್ರತಿ ಕೆಲಸಕ್ಕೂ ಲೋಕಾಯುಕ್ತ ಅಧಿಕಾರಿಗಳ ಮೊರೆಗೆ ಹೋಗಿ ಕೆಲಸ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

"ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಆನೇಕಲ್ನಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದರೆ ತಾಲೂಕು ಕಚೇರಿಯಲ್ಲಿ ರೈತರ ಕೆಲಸಗಳು ಹಾಗೂ ಸಾಮಾನ್ಯ ಜನ ಬಂದರೆ ಇಲ್ಲಿ ಕೆಲಸಗಳು ಆಗುತ್ತಿಲ್ಲ."

ಮಂಜುನಾಥ್, ರಾಷ್ಟ್ರೀಯ ಕಿಸಾನ್ ಸಂಘ ಸದಸ್ಯ

"ನಗರಕ್ಕೆ ಹೊಂದಿಕೊಂಡಿರುವ ಆನೇಕಲ್ನಲ್ಲಿ ಅಭಿವೃದ್ಧಿ ಕುಂಠಿತ ಆಗಿ ಜನ ಪರದಾಡುತ್ತಿದ್ದು, ಇನ್ನೊಂದೆಡೆ ರೈತರ ಕೆಲಸಗಳು ಆಗದೆ ರಾಗಿಯ ಕಣಜದ ನಾಡಿಗೆ ಭ್ರಷ್ಟಾಚಾರದ ಕಪ್ಪು ಚುಕ್ಕೆ ನಿರಂತರ ಕಾಡುತ್ತಿದೆ."

ಶ್ರೀನಿವಾಸ್ ಸ್ಥಳೀಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net