120 ವರ್ಷಗಳ ಹಿಂದೆಯೂ ಮಂಗಳೂರು ಇಂತಹದ್ದೇ ಸಂಕಷ್ಟ ಎದುರಿಸಿತ್ತು ಎನ್ನುತ್ತಿದೆ ನಗರ ಪಾಲಿಕೆಯ ಹಿಂದಿನ ದಾಖಲೆಗಳು!

mangalore new
Published on

ಪಿ.ಬಿ.ಹರೀಶ್ ರೈ

ಮಂಗಳೂರು: ಕರೊನಾ ಸೋಂಕು ಹರಡುವ ಭೀತಿಯಲ್ಲಿ ಜಗತ್ತೇ ಈಗ ಕಂಗೆಟ್ಟಿದೆ. ಮಂಗಳೂರು ನಗರ ಸಹಿತ ದ.ಕ ಜಿಲ್ಲೆಯೂ ಕಳೆದ ಒಂದು ತಿಂಗಳಿನಿಂದ ಆತಂಕದ ದಿನಗಳನ್ನು ಎದುರಿಸುತ್ತಿದೆ. 120 ವರ್ಷಗಳ ಹಿಂದೆಯೂ ಮಂಗಳೂರು ಇಂತಹದ್ದೇ ಸಂಕಷ್ಟ ಎದುರಿಸಿತ್ತು ಎನ್ನುತ್ತಿದೆ ನಗರ ಪಾಲಿಕೆಯ ಹಿಂದಿನ ದಾಖಲೆಗಳು!

ಆಗ ಜನಸಂಖ್ಯೆ ತೀರಾ ಕಡಿಮೆ. ವಾಹನಗಳ ಓಡಾಟ ಇರಲಿಲ್ಲ. ವೈದ್ಯಕೀಯ ಸೌಲಭ್ಯವೂ ಇರಲಿಲ್ಲ. ಸಣ್ಣ ಪಟ್ಟಣವಾಗಿದ್ದ ಮಂಗಳೂರಿನಲ್ಲಿ ಪ್ಲೇಗ್ ರೋಗ ಹಬ್ಬಿತ್ತು. ನೂರಾರು ಮಂದಿಗೆ ಪ್ಲೇಗ್‌ಗೆ ಬಲಿಯಾಗಿದ್ದರು. ಹತ್ತು ವರ್ಷ ಬಿಡದೆ ಕಾಡಿತ್ತು ಪ್ಲೇಗ್. ಆ ಬಳಿಕ ಸಿಡುಬು, ಕಾಲರಾ, ಟೈಫಾಯ್ಡ, ಕುಷ್ಠ, ಕ್ಷಯ, ಮಲೇರಿಯಾ, ಫೈಲೇರಿಯಾ, ಚಿಕೂನ್‌ಗುನ್ಯಾ, ಡೆಂೆ.. ಹೀಗೆ ಒಂದಲ್ಲ ಒಂದು ಸಾಂಕ್ರಾಮಿಕ ರೋಗ ಬಾಧಿಸುತ್ತಲೇ ಇದೆ. ಈಗ ಕರೊನಾ ಭೀತಿ.

ಆಗ ಬ್ರಿಟಿಷರ ಆಡಳಿತ. ಮಂಗಳೂರು ನಗರ ಮದ್ರಾಸ್ ಪ್ರೆಸಿಡೆನ್ಸಿಯ ಆಡಳಿತಕ್ಕೆ ಒಳಪಟ್ಟಿತ್ತು. 1900ರ ಫೆ.26ರಂದು ಮುಂಬೈಯಿಂದ ಮಂಗಳೂರು ಬಂದರಿಗೆ ಬಂದಿದ್ದ ಶೆಫರ್ಡ್ ಲೈನ್ ಸ್ಟೀಮರ್ ಎಸ್.ಎಸ್. ಹಡಗಿನ ಮೂಲಕ ಪ್ಲೇಗ್ ರೋಗ ಬಂತು ಎನ್ನುವ ಉಲ್ಲೇಖವಿದೆ. 1902ರಲ್ಲಿ ಅತೀ ಹೆಚ್ಚು 860 ಮಂದಿ ಪ್ಲೇಗ್‌ಗೆ ಬಲಿಯಾಗಿದ್ದರು. ಬಡ ಕುಷ್ಠ ರೋಗಿಗಳಿಗೆ 1890ರಲ್ಲಿ ಸೇಂಟ್ ಜೋಸೆಫ್ಸ್ ಲೆಪ್ರಸಿ ಆಸ್ಪತ್ರೆ ಸ್ಥಾಪಿಸಿದ ಫಾದರ್ ಆಗಸ್ಟ್‌ಸ್ ಮುಲ್ಲರ್ 1902ರಲ್ಲಿ ಮಂಗಳೂರಿನಲ್ಲಿ ಬ್ಯುಬೋನಿಕ್ ಪ್ಲೇಗ್ ತಲೆದೋರಿದಾಗ ಸರ್ಕಾರ ಹಾಗೂ ಸಮಾಜಸೇವಕರ ನೆರವು ಪಡೆದು ಪ್ಲೇಗ್ ಪೀಡಿತ ರೋಗಿಗಳ ಚಿಕಿತ್ಸೆಗೆ ಒಂದು ಆಸ್ಪತ್ರೆ ನಿರ್ಮಿಸಿದರು ಎನ್ನುವ ಅಂಶ ಮಂಗಳೂರಿನ ಇತಿಹಾಸದಲ್ಲಿ ದಾಖಲಾಗಿದೆ.

ಮರಣ ಸಂಖ್ಯೆ ಅಧಿಕ

ವೆನ್ಲಾಕ್ ಆಸ್ಪತ್ರೆ ಆಗ ಮಂಗಳೂರು ಪುರಸಭೆಯ ಅಧೀನದಲ್ಲಿತ್ತು. ಪುರಸಭೆಯಲ್ಲಿ 4 ಮಂದಿ ಬ್ರಿಟಿಷ್ ಹಾಗೂ 16 ಮಂದಿ ಭಾರತೀಯ ಸದಸ್ಯರಿದ್ದರು. ಸುಮಾರು 10 ವರ್ಷಗಳ ಕಾಲ ಮಂಗಳೂರನ್ನು ಪ್ಲೇಗ್ ರೋಗ ಬಾಧಿಸಿತ್ತು. 1892ರಿಂದ 1910ರವರೆಗೆ ಕಾಲರಾ ಮತ್ತು ಸಿಡುಬು ರೋಗಗಳಿಂದ ಮಂಗಳೂರು ನಗರ ತತ್ತರಿಸಿತ್ತು. ಈ ಅವಧಿಯಲ್ಲಿ ಜನನ ಪ್ರಮಾಣಕ್ಕಿಂತ ಮರಣದ ಸಂಖ್ಯೆ ಅಧಿಕವಾಗಿತ್ತು. ನಗರ ಪಾಲಿಕೆಯಲ್ಲಿರುವ ಶತಮಾನದ ಹಿಂದಿನ ಕಡತಗಳ ಪ್ರಕಾರ 1902-03ರಲ್ಲಿ ಜನನ -1164, ಮರಣ-1834, 1903-04ರಲ್ಲಿ ಜನನ-1204, ಮರಣ-1640, 1904-05ರಲ್ಲಿ ಜನನ-1274, ಮರಣ-1449.

ಆಯಾ ವರ್ಷಗಳಲ್ಲಿ ಪ್ಲೇಗ್‌ಗೆ ಬಲಿಯಾದ ವಿವರ 1902-860 1903-427 1904-411 1905-127 1907-101 1908-221 1909-132

ಪ್ಲೇಗ್ ರೋಗದ ಭೀಕರತೆ, ಸಾವು ನೋವಿನ ಬಗ್ಗೆ ನಮ್ಮ ಹಿರಿಯರು ನೆನಪಿಸಿಕೊಳ್ಳುತ್ತಿದ್ದರು. 1955ರ ವೇಳೆಗೆ ಫ್ಲೂ ಬಾಧಿಸಿತ್ತು. ಆಗ ಒಂದು ರೀತಿಯ ಲಾಕ್‌ಡೌನ್ ವಾತಾವರಣ ಎನ್ನಬಹುದು. ಜನ ಮನೆಯಿಂದ ಹೊರಬರಲು ಹೆದರುವ ಸ್ಥಿತಿ ಇತ್ತು. ಪ್ರತಿ ಮನೆಯಲ್ಲೂ ಜ್ವರದಿಂದ ಬಳಲುತ್ತಿದ್ದರು. ಆಗ ಬಂಟ್ವಾಳದ ಸರ್ಕಾರಿ ಲೋಕಲ್ ಫಂಡ್ ಆಸ್ಪತ್ರೆಯಲ್ಲಿ ಔಷಧ ಪಡೆಯಲು ಜನ ಕ್ಯೂ ನಿಲ್ಲುತ್ತಿದ್ದರು. ನಾವು ಸ್ವಯಂಸೇವಕರಾಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೆವು. ಆ ಬಳಿಕ ದೊಡ್ಡ ಮಟ್ಟದಲ್ಲಿ ಸಾಂಕ್ರಾಮಿಕ ರೋಗ ಹರಡಿದ್ದು ಕಡಿಮೆ ಎನ್ನಬಹುದು. ಬಸ್ತಿ ವಾಮನ ಶೆಣೈ ಹಿರಿಯ ನಾಗರಿಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net