

ಮೈಸೂರು: ಕೃತಿಚೌರ್ಯದಿಂದ ವಿದ್ಯಾರ್ಥಿಯ ಪ್ರತಿಷ್ಠೆ, ವೃತ್ತಿಪರ ಪ್ರತಿಷ್ಠೆ, ಶಿಕ್ಷಣದ ಪ್ರತಿಷ್ಠೆಗಳು ನಾಶಗೊಳ್ಳುವುದಷ್ಟೇ ಅಲ್ಲದೆ, ಕಾನೂನು ಪರಿಣಾಮ ಹಾಗೂ ಹಣಕಾಸಿನ ಪರಿಣಾಮಗಳೂ ಉಂಟಾಗುತ್ತವೆ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಎಚ್.ರಾಜಶೇಖರ್ ತಿಳಿಸಿದರು.
ಸಿಎಸ್‌ಐಆರ್-ಯುಜಿಸಿ ನೆಟ್ ತರಬೇತಿ ಕೇಂದ್ರ, ಆಂತರಿಕ ಗುಣಮಟ್ಟ ಖಾತ್ರಿ ಘಟಕ ಹಾಗೂ ಸಂಶೋಧಕರ ಸಂಘದ ವತಿಯಿಂದ ಬುಧವಾರ ಮಾನಸಗಂಗೋತ್ರಿಯ ಇಎಂಆರ್‌ಸಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕೃತಿಚೌರ್ಯ ತಡೆಗಟ್ಟುವಿಕೆ: ಗುಣಾತ್ಮಕ ಮಹಾಪ್ರಬಂಧದ ರಚನೆಯತ್ತ ಮೊದಲ ಹೆಜ್ಜೆ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಬಂಧಗಳನ್ನು ಬರೆಯುವುದಕ್ಕೆ ಮುಂಚೆ ಕೃತಿಚೌರ್ಯದ ಬಗ್ಗೆ ತಿಳಿದುಕೊಳ್ಳುವುದು ಹಾಗೂ ಅದನ್ನು ತಪ್ಪಿಸುವುದರ ಕುರಿತು ತಿಳಿದುಕೊಳ್ಳುವುದು ಅಗತ್ಯ ಎಂದು ಅಭಿಪ್ರಾಯಿಸಿದರು.
ಕೃತಿಚೌರ್ಯ ಎಂದರೆ ತಿದ್ದಲಾಗದ ಸಮಸ್ಯೆ, ಅದರಲ್ಲಿಯೂ ವಿಶೇಷವಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಕೃತಿಚೌರ್ಯದ ಪರಿಣಾಮಗಳು ವ್ಯಕ್ತಿಗತ, ವೃತ್ತಿಪರ, ತಾತ್ವಿಕ ಹಾಗೂ ಕಾನೂನು ಈ ಪೈಕಿ ಯಾವುದಾದರೂ ಅಂಶಗಳ ಮೇಲೆ ಉಂಟಾಗಬಹುದು ಎಂದರು.
ಕಳೆದ ವರ್ಷ ಮೈಸೂರು ವಿಶ್ವವಿದ್ಯಾಲಯಕ್ಕೆ ನ್ಯಾಕ್ ವತಿಯಿಂದ ಎ ಶ್ರೇಣಿ ಲಭಿಸಿದ್ದು, ವಿಶ್ವವಿದ್ಯಾಲಯಗಳ ಪೈಕಿ 33ನೇ ಶ್ರೇಯಾಂಕವನ್ನು ಪಡೆದುಕೊಂಡಿದೆ. ನಮ್ಮ ವಿಶ್ವವಿದ್ಯಾಲಯ ಇನ್ನೂ ಉತ್ತಮ ಸಾಧನೆ ಮಾಡಬಹುದಾಗಿತ್ತು. ಆದರೆ ಬೋಧಕರ ಕೊರತೆ ಹಾಗೂ ಸಂಶೋಧನಾ ಪರಿಣಾಮದ ಕೊರತೆಯಿಂದಾಗಿ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಐಎನ್‌ಎಸ್‌ಎ ಹಿರಿಯ ವಿಜ್ಞಾನಿ ಹಾಗೂ ದೆಹಲಿ ವಿವಿ ಸಸ್ಯಶಾಸ್ತ್ರ ವಿಭಾಗದ ಮಾಜಿ ಅಧ್ಯಕ್ಷ ಪ್ರೊ.ಕೆ.ಆರ್.ಶಿವಣ್ಣ, ಕಲಾ ನಿಕಾಯ ಡೀನ್ ಪ್ರೊ.ಮುಜಾಫರ್ ಅಸಾದಿ, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ ಡೀನ್ ಪ್ರೊ.ಎಚ್.ಟಿ ಬಸವರಾಜಪ್ಪ ಇತರರಿದ್ದರು.