ಪೌರಕಾರ್ಮಿಕರಿಗೆ ನಿವೇಶನ ಕಲ್ಪಿಸುವುದು ನಮ್ಮ ಮೊದಲ ಆದ್ಯತೆ

24¸spt1
ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಜಯಂತಿ, ನಾಚಪ್ಪ, ಸತೀಶ್, ಮಂಜುನಾಥ್, ಆದಂ ಇದ್ದರು.
Published on

ಸೋಮವಾರಪೇಟೆ: ಪೌರಕಾರ್ಮಿಕರಿಗೆ ನಿವೇಶನ ಕಲ್ಪಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಹೇಳಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಪೌರಕಾರ್ಮಿಕರಿಗೆ ನಿವೇಶನ ನೀಡಬೇಕೆಂಬುದು ಈ ಹಿಂದೆಯೇ ಪಂಚಾಯಿತಿ ಆಡಳಿತ ತೀರ್ಮಾನಿಸಿತ್ತು. ಪ್ರಸಕ್ತ ವರ್ಷದಲ್ಲಿ ನಿವೇಶನ ನೀಡಲಾಗುವುದು ಎಂದು ಹೇಳಿದರು.

ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಜನರ ಅರೋಗ್ಯವನ್ನು ಕಾಪಾಡಲು ಶ್ರಮಿಸುತ್ತಿದ್ದಾರೆ. ಪೌರಕಾರ್ಮಿಕರ ಅರೋಗ್ಯವನ್ನು ಕಾಪಾಡುವುದು ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಜವಾಬ್ದಾರಿಯಾಗಿದೆ. ಅವರ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಹೇಳಿದರು.
ಮುಖ್ಯಾಧಿಕಾರಿ ನಾಚಪ್ಪ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಕಸ ವಿಲೇವಾರಿ ಸಮಸ್ಯೆ ಎದುರಿಸುತ್ತಿದ್ದೇವೆ. ಪೌರಕಾರ್ಮಿಕರು ಹೇಗೋ ಬ್ಯಾಲೆನ್ಸ್ ಮಾಡಿದ್ದಾರೆ. ಅವರ ಕರ್ತವ್ಯವನ್ನು ಸ್ಮರಿಸಬೇಕಾಗಿದೆ. ಮುಂದಿನ ಮಳೆಗಾಲದೊಳಗೆ ಕಸ ವಿಲೇವಾರಿ ಘಟಕ ಪ್ರಾರಂಭವಾಗಲಿದೆ. ಪೌರಕಾರ್ಮಿಕರಿಂದ ಒತ್ತಡ ಕಡಿಮೆಯಾಗಲಿದೆ. ಅವರಿಗೆ ನಿವೇಶನ ನೀಡುವುದಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಸದಸ್ಯ ಬಿ.ಸಂಜೀವ ಮಾತನಾಡಿ, ಸರ್ಕಾರದ ಸೌಲಭ್ಯಗಳು ಪೌರಕಾರ್ಮಿಕರಿಗೆ ಸಿಗಬೇಕಾದರೆ ಪಂಚಾಯಿತಿ ನೌಕರರಿಗೆ ಕರುಣೆ ಇರಬೇಕು. ಪೌರಕಾರ್ಮಿಕರು ನಿವೃತ್ತಿಗೆ ಮುಂಚೆಯೇ ನಿವೇಶನ ಕಲ್ಪಿಸಿದರೆ, ಸಾಲ ಮಾಡಿಯಾದರೂ ಮನೆ ಕಟ್ಟಿಕೊಳ್ಳುತ್ತಾರೆ. ಮನೆಗೆ ಅರ್ಜಿ ಹಾಕಿಕೊಂಡ ಫಲಾನುಭವಿಗಳು ಸತ್ತೇ ಹೋಗಿದ್ದಾರೆ. ಯಾಕಿಷ್ಟು ವಿಳಂಬ? ಎಂದು ಪ್ರಶ್ನಿಸಿದ ಅವರು, ನಿವೇಶನ ಕಲ್ಪಿಸಲು ಮುಖ್ಯಾಧಿಕಾರಿ ಭರವಸೆ ನೀಡದಿದ್ದರೆ ಮುಂದೆ ನಡೆಯುವ ಯಾವುದೇ ಸಾಮಾನ್ಯ ಸಭೆಗೆ ಹಾಜರಾಗುವುದಿಲ್ಲ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಸತೀಶ್, ತಾಲೂಕು ಅಧ್ಯಕ್ಷ ಮಂಜುನಾಥ್, ಸೋಮವಾರಪೇಟೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎ.ಆದಂ, ಪಂಚಾಯಿತಿ ಕೌನ್ಸಿಲರ್‌ಗಳಾದ ನಾಗರತ್ನಾ, ಬಿ.ಸಿ.ವೆಂಕಟೇಶ್, ಪಿ.ಕೆ.ಚಂದ್ರು, ಬಿ.ಆರ್.ಮಹೇಶ್, ಜೀವನ್, ಮೃತ್ಯುಂಜಯ, ಶುಭಕರ್, ಕಿರಣ್, ಎಚ್.ಎ.ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net