

ಶಿವಮೊಗ್ಗ: ಮಾನಸಿಕ ಹಿಂಸೆ ಕಾರಣದಿಂದ ಸಿಎಂ ಪತ್ನಿ ಪಾರ್ವತಿ ಅವರು ಮುಡಾ ನಿವೇಶನಗಳನ್ನು ಹಿಂದಕ್ಕೆ ನೀಡಿದ್ದಾರೆ. ತನ್ನಿಂದ ಪತಿಗೆ ತೊಂದರೆ ಆಗಬಾರದೆಂಬ ಕಳಕಳಿಯೂ ಅವರ ನಿರ್ಧಾರದ ಹಿಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ನಿವೇಶನ ಹಿಂದಕ್ಕೆ ನೀಡುವ ಪತ್ನಿ ನಿರ್ಧಾರದ ಬಗ್ಗೆ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿದ್ದಾರೆ. 12 ವರ್ಷದ ಹಿಂದಿನ ಪ್ರಕರಣ ಈಗ ಸದ್ದು ಮಾಡುತ್ತಿದೆ. ಇಷ್ಟು ವರ್ಷ ಯಾವ ಕಳಂಕವಿಲ್ಲದೆ ರಾಜಕೀಯ ಮಾಡಿದ ಸಿದ್ದರಾಮಯ್ಯ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಎಲ್ಲ ಕಡೆಯಿಂದ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗದವರು ಇತ್ತೀಚಿನ ವರ್ಷಗಳಲ್ಲಿ ಎರಡನೇ ಬಾರಿಗೆ ರಾಜ್ಯದಲ್ಲಿ ಸಿಎಂ ಆಗಿದ್ದಾರೆ. ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಈಗ ಸಿಎಂ ವಿರುದ್ಧವೇ ಎಫ್‌ಐಆರ್ ಆಗಿದೆ. ಸಿದ್ದರಾಮಯ್ಯ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಆದರೆ ಈ ವಿಷಯದಲ್ಲಿ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯವನ್ನು ಮುಂದಕ್ಕೆ ತಂದಿರುವುದು ತಪ್ಪು ಎಂದರು.
ಬಿಜೆಪಿ ಮುಖಂಡರು ಸಿಎಂ ರಾಜೀನಾಮೆ ಕೇಳುತ್ತಿದ್ದಾರೆ. ಇವರು ಕೇಳುತ್ತಾರೆ ಎಂದ ಕೂಡಲೇ ರಾಜೀನಾಮೆ ನೀಡುವವರು ಯಾರೂ ಇಲ್ಲ. ಎಫ್‌ಐಆರ್ ದಾಖಲಾದರೆ ರಾಜೀನಾಮೆ ನೀಡಬೇಕೆಂಬ ನಿಯಮವಿದೆಯೇ? ಮೈಸೂರಿಗೆ ಪಾದಯಾತ್ರೆ ಮಾಡಿದವರು ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಏನಿದೆ ಎಂಬುದನ್ನು ಓದಿದ್ದಾರೆಯೇ? ಎಂದು ಮಧು ಪ್ರಶ್ನಿಸಿದರು.
136 ಶಾಸಕರು ಸಿಎಂ ಸಿದ್ದರಾಮಯ್ಯ ಜತೆ ಇದ್ದಾರೆ. ಅದು ಸಿದ್ದರಾಮಯ್ಯ ಶಕ್ತಿ, ಸಿದ್ದರಾಮಯ್ಯ ಅವರು ನಮ್ಮ ಶಕ್ತಿ. ಅವರ ವಿರುದ್ಧ ಟ್ವೀಟ್ ಮಾಡುವುದೇ ಬಿಜೆಪಿಯವರ ಸಾಧನೆ. ಅಧಿಕಾರಕ್ಕಾಗಿ ಅವರ ನಡುವೆ ಇನ್ನಿಲ್ಲದ ಸ್ಪರ್ಧೆಯಿದೆ ಎಂದರು.