

ಕಾಗವಾಡ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಜನ ಸದಸ್ಯ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಧಾರವಾಡದ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿದೆ.
ಅಥಣಿ ಸಹಕಾರ ಅಭಿವೃದ್ಧಿ ಅಧಿಕಾರಿ ಹಾಗೂ ಚುನಾವಣಾಧಿಕಾರಿ ಆರ್.ಎನ್.ನೂಲಿ ನೇತೃತ್ವದಲ್ಲಿ ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ನಡೆದ ಮತದಾನ ಪ್ರಕಿಯೆಯಲ್ಲಿ ಒಟ್ಟು 1,264 ಸದಸ್ಯರು ಮತ ಚಲಾಯಿಸಿದರು. ರೈತ ಅಭಿವೃದ್ಧಿ ಪೆನಲ್ ಎಸ್‌ಟಿ ಸಾಲಗಾರ ವಿಭಾಗದಿಂದ ಸ್ಪರ್ಧಿಸಿದ್ದ ಶಂಕರ ನಾಯಿಕ ನಾಮಪತ್ರ ಪರಿಶೀಲನೆ ವೇಳೆ ತಿರಸ್ಕೃತಗೊಂಡಿದ್ದರಿಂದ ಅವರು ಹೈಕೋರ್ಟ್‌ನಲ್ಲಿ ನಾಮಪತ್ರ ಪರಿಶೀಲನೆ ಆದೇಶದ ವಿರುದ್ಧ ತಡೆಯಾಜ್ಞೆ ಪಡೆದುಕೊಂಡು ಚುನಾವಣೆಯಿಂದ ದೂರ ಉಳಿದಿದ್ದರು.
ಈಗ ಅರ್ಜಿ ವಿಚಾರಣೆ ಮುಗಿಯುವವರೆಗೆ ಮತ ಎಣಿಕೆ ಮಾಡದಂತೆ ಹೈಕೋರ್ಟ್ ಸೂಚನೆ ನೀಡಿದ್ದರಿಂದ ಮತದಾನದ ನಂತರ ಮುಂದಿನ ಆದೇಶದವರೆಗೆ ಮತಪೆಟ್ಟಿಗೆಗಳನ್ನು ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗಿದೆ.