

ಕಿಕ್ಕೇರಿ: ಹೋಬಳಿಯಲ್ಲಿಯೇ ಕಡೆಯದಾಗಿ ಲಕ್ಷ್ಮೀಪುರ ಗ್ರಾಮದಲ್ಲಿ ಪಿತೃಪಕ್ಷ ಆಚರಣೆ ಅ.6ರಂದು ನಡೆಯಲಿದ್ದು ಕುರಿ, ಮೇಕೆಗಳ ಖರೀದಿ ಭರಾಟೆ ಜೋರಾಗಿದೆ.
ಸುಮಾರು 500 ಮನೆಗಳಿರುವ ಗ್ರಾಮದಲ್ಲಿ ಪಿತೃಪಕ್ಷ ಆಚರಣೆಗೆ ಇಡೀ ಊರಲ್ಲಿ ಸಂಭ್ರಮ ಮನೆ ಮಾಡಿದೆ. ಪ್ರತಿ ಮನೆಗೆ ಕನಿಷ್ಠ ಒಂದು ಅಥವಾ ಎರಡು ಮೇಕೆ, ಕುರಿಗಳನ್ನು ಖರೀದಿಸಿ ಹಬ್ಬಕ್ಕೆ ಮಾಂಸದ ಅಡುಗೆ ಮಾಡುವುದು ಗ್ರಾಮದ ಪ್ರತೀತಿ. ಇಡೀ ತಾಲೂಕಿನಲ್ಲಿಯೇ ಅತಿಥಿ ಸತ್ಕಾರದಲ್ಲಿ ಗ್ರಾಮ ಹೆಸರುವಾಸಿಯಾಗಿದೆ.
ಸುಮಾರು 500ಕ್ಕೂ ಹೆಚ್ಚು ಕುರಿ, ಮೇಕೆಗಳನ್ನು ಹಬ್ಬಕ್ಕಾಗಿ ಗ್ರಾಮದಲ್ಲಿ ಬಳಸಲಾಗುವುದು. ಹಲವರು ಮೇಕೆ, ಕುರಿಗಳನ್ನು ಹಬ್ಬಕ್ಕೆ ಸಾಕಿಕೊಂಡಿದ್ದರೆ, ಕೆಲವರು ಕುರಿಗಳನ್ನು ಶ್ರವಣಬೆಳಗೊಳ, ಚನ್ನರಾಯಪಟ್ಟಣ ಮತ್ತಿತರ ಪ್ರದೇಶಗಳಿಂದ ಖರೀದಿಸಿ ತಂದಿದ್ದಾರೆ. ಮತ್ತೆ ಕೆಲವರು ಗುಡ್ಡೆಬಾಡು (ಮಾಂಸ) ಕೂಡ ಮಾಡಿಕೊಂಡು ಹಬ್ಬದೂಟಕ್ಕೆ ಪರಸ್ಪರ ಹಂಚಿಕೊಳ್ಳುವುದು ಉಂಟು.
ಪ್ರತಿ ಮನೆಗಳಲ್ಲಿ ಹಿರಿಯ ಪಿತೃಗಳ ಫೋಟೋ, ಕಳಸವಿಡುವುದು ಹಬ್ಬದ ವಿಶೇಷತೆಯಾಗಿದೆ. ಮಾಂಸದ ಅಡುಗೆಯನ್ನು ಹಿರಿಯರಿಗೆ ನೈವೇದ್ಯವಾಗಿ ಅರ್ಪಿಸಿ ಬಂದ ನೆಂಟರಿಷ್ಟರಿಗೆ ಮಾಂಸದೂಟ ಬಡಿಸಿ, ತಾವೂ ಸವಿದು ಸಂಭ್ರಮಿಸುತ್ತಾರೆ.
ಪರಸ್ಥಳದಲ್ಲಿ ನೆಲೆಸಿರುವ ಗ್ರಾಮದ ಮೂಲದವರು, ಯುವಕರು ಗ್ರಾಮಕ್ಕೆ ಆಗಮಿಸಿ ಹಬ್ಬದ ತಯಾರಿಗೆ ಸಜ್ಜಾಗಿದ್ದಾರೆ. ಹಲವರು ಅತಿಥಿಗಳನ್ನು ಸ್ವಾಗತಿಸಲು ಪ್ಲೆಕ್ಸ್ ಬ್ಯಾನರ್‌ಗಳನ್ನು ಅಳವಡಿಸುತ್ತಿದ್ದಾರೆ.