

ಸಿದ್ದಾಪುರ: ತಾಲೂಕಿನಾದ್ಯಂತ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಹೊಂಡ ಬಿದ್ದು ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವುದನ್ನು ಮನಗಂಡ ರಸ್ತೆ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆ ರಸ್ತೆಯಲ್ಲಿನ ಹೊಂಡ ಮುಚ್ಚುವ ಕಾಮಗಾರಿ ನಡೆಸುತ್ತಿದೆ.
ತಾಲೂಕಿನಲ್ಲಿನ 223.33 ಕಿಮೀ ರಾಜ್ಯ ಹೆದ್ದಾರಿ ಹಾಗೂ 333.38 ಕಿ.ಮೀ. ಜಿಲ್ಲಾ ಮುಖ್ಯರಸ್ತೆ ಇದೆ. ಈ ವರ್ಷದ ವಿಪರೀತ ಮಳೆ ಹಾಗೂ ರಸ್ತೆ ಪಕ್ಕದ ಚರಂಡಿಗಳ ಅವ್ಯವಸ್ಥೆಯಿಂದ ಎಲ್ಲ ರಸ್ತೆಗಳಲ್ಲಿ ಹೊಂಡಗಳೇ ತುಂಬಿಕೊಂಡಿವೆ. ಹಲವೆಡೆ ರಸ್ತೆ ಮಧ್ಯೆ ಬಿದ್ದಿರುವ ಭಯಾನಕ ಹೊಂಡಗಳು ವಾಹನ ಸಂಚಾರಕ್ಕೆ ನರಕ ದರ್ಶನ ಮಾಡಿಸುವಂತಿದೆ. ಈಗಾಗಲೇ ರಸ್ತೆಯಲ್ಲಿನ ಹೊಂಡಗಳಿಂದಾಗಿ ಬೈಕ್ ಸವಾರರು ಬಿದ್ದು ಕೈಕಾಲು ಮುರಿದುಕೊಂಡು ಲೋಕೋಪಯೋಗಿ ಇಲಾಖೆ ಹಾಗೂ ತಾಲೂಕಾಡಳಿತದ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.
ಹೊಂಡ ಮುಚ್ಚುವ ಕಾಮಗಾರಿ ಶುರು: ವಾರ್ಷಿಕ ನಿರ್ವಹಣೆ ಯೋಜನೆಯಲ್ಲಿ ಕಳೆದ ಒಂದು ವಾರದಿಂದ ಲೋಕೋಪಯೋಗಿ ಇಲಾಖೆಯು ಹೊಂಡ ಮುಚ್ಚುವ ಹಾಗೂ ಜಂಗಲ್ ಕಟಿಂಗ್ ಕಾಮಗಾರಿ ನಡೆಸುತ್ತಿದೆ. ಶಿರಸಿ-ಸಿದ್ದಾಪುರ ರಾಜ್ಯ ಹೆದ್ದಾರಿಯಲ್ಲಿ ಹೊಂಡ ಮುಚ್ಚುತ್ತಿರುವ ಕಾಮಗಾರಿಯನ್ನು ಶಾಸಕ ಭೀಮಣ್ಣ ನಾಯ್ಕ ಪರಿಶೀಲಿಸಿ ಸಮರ್ಪಕವಾಗಿ ನಿರ್ವಹಿಸುವಂತೆ ಗುತ್ತಿಗೆದಾರರು ಹಾಗೂ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮರುಡಾಂಬರೀಕರಣಕ್ಕೆ ಒತ್ತಾಯ: ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯರಸ್ತೆಗಳ ಹಲವೆಡೆ ಭಾರಿ ಗಾತ್ರದ ಹೊಂಡಗಳು ಬಿದ್ದಿದ್ದು, ಇಲ್ಲಿ ಹೊಂಡ ಮುಚ್ಚುವ ಕಾಮಗಾರಿ ಮಾಡಿದರೆ ಸಾಲದು. ಹೊಂಡ ಮುಚ್ಚಿರುವುದು ಒಂದು ತಿಂಗಳೊಳಗಾಗಿ ಕಿತ್ತೆದ್ದು ಮತ್ತೆ ಹೊಂಡ ಬೀಳುತ್ತದೆ. ಆದ್ದರಿಂದ ಮರುಡಾಂಬರೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ವಾಹನ ಸವಾರರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯರಸ್ತೆಗಳಲ್ಲಿನ ಹೊಂಡ ಮುಚ್ಚುವ ಕಾಮಗಾರಿ ನಡೆಸಲಾಗುತ್ತಿದೆ. ರಸ್ತೆ ಮರುಡಾಂಬರೀಕರಣ ಕುರಿತು ಈಗಾಗಲೇ ಕ್ರಿಯಾ ಯೋಜನೆ ರೂಪಿಸಿ ಇಲಾಖೆಯ ಮೇಲಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಶಶಿಕಾಂತ ಗೌಡ ಎಇಇ, ಲೋಕೋಪಯೋಗಿ ಇಲಾಖೆ ಸಿದ್ದಾಪುರ