

ಮಂಗಳೂರು: ನಗರದಲ್ಲಿ ಅಪರಾಧ ಕೃತ್ಯವನ್ನು ನಡೆಸುವ ಉದ್ದೇಶದಿಂದ ಅಕ್ರಮವಾಗಿ ಪಿಸ್ತೂಲ್, ರಿವಾಲ್ವರ್, ಸಜೀವ ಮದ್ದುಗುಂಡುಗಳು, ಮಾದಕ ವಸ್ತುಗಳನ್ನು ಹೊಂದಿದ್ದ ಭೂಗತ ಪಾತಕಿ ಕಲಿ ಯೋಗೀಶನ ಸಹಚರರಿಬ್ಬರನ್ನು ಮಂಗಳೂರು ಅಪರಾಧ ಪತ್ತೆದಳ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ಪೈವಳಿಕೆ ಕುರುಡುಪದವು ದೇರ ಹೌಸ್ ಮೊಹಮ್ಮದ್ ಹನೀಫ್ (40) ಹಾಗೂ ಮೂಲತಃ ಬಂಟ್ವಾಳ ತಾಲೂಕು ಮುಡಿಪು ಚರ್ಚ್ ಹಿಂಬದಿಯ ನಿವಾಸಿ ಮೊಹಮ್ಮದ್ ರಫೀಕ್ (36) ಬಂಧಿತರು. ಈತ ಪ್ರಸ್ತುತ ಬೆಂಗಳೂರು ಮುನೀಶ್ವರ ದೇವಳದ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅವರ ವಶದಿಂದ 1 ಪಿಸ್ತೂಲ್, 1 ರಿವಾಲ್ವರ್, 12 ಸಜೀವ ಮದ್ದುಗುಂಡುಗಳು, 42 ಗ್ರಾಂ ಮಾದಕ ವಸ್ತುವಾದ ಎಂಡಿಎಂಎ, ಇನ್ನೋವಾ ಕಾರು ಹಾಗೂ 3 ಮೊಬೈಲ್ ಫೋನುಗಳು, ಡಿಜಿಟಲ್ ತೂಕ ಮಾಪಕ ಸೇರಿದಂತೆ ಸುಮಾರು 10 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಲಿ ಯೋಗೀಶನ ಸಹಚರರು: ಬಂಧಿತ ಇಬ್ಬರು ಆರೋಪಿಗಳು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ಕಲಿ ಯೋಗೀಶನ ಸಹಚರರು. ಇನ್ನೋವಾ ಕಾರಿನಲ್ಲಿ ಮಂಗಳೂರು ನಗರದಲ್ಲಿ ಅಪರಾಧ ಕೃತ್ಯವನ್ನು ನಡೆಸಲು ಸಂಚು ರೂಫಿಸಿ ತಿರುಗಾಡಿಕೊಂಡಿರುವ ಕುರಿತು ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರು ನಗರದ ಫಳ್ನೀರ್ ಬಳಿಯಿಂದ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಇತ್ತೀಚೆಗೆ ಸೌರಾಷ್ಟ್ರ ಬಟ್ಟೆ ಅಂಗಡಿ ಮಾಲೀಕರಿಗೆ ಹಾಗೂ ಕಾರ್ಕಳದ ಉದ್ಯಮಿಯೊಬ್ಬರಿಗೆ ಹಫ್ತಾಕ್ಕಾಗಿ ಬೆದರಿಕೆ ಒಡ್ಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪೈಕಿ ಮೊಹಮ್ಮದ್ ಹನೀಫ್ ಅಲಿ ಮುನ್ನಾ ಎಂಬಾತನು ಈ ಹಿಂದೆ ಮಂಗಳೂರು ನಗರದ ಸಂಜೀವ ಶೆಟ್ಟಿ ಬಟ್ಟೆ ಅಂಗಡಿಯಲ್ಲಿ ಶೂಟೌಟ್ ನಡೆಸಿದ ಪ್ರಕರಣ, ಪುತ್ತೂರು ರಾಜಧಾನಿ ಜ್ಯುವೆಲ್ಲರಿ ಶೂಟೌಟ್ ಪ್ರಕರಣ, ಕೇರಳದ ಕಾಸರಗೋಡು ಜಿಲ್ಲೆಯ ಬೇವಿಂಜೆಯ ಪಿಡಬ್ಲೂಡಿ ಕಂಟ್ರಾಕ್ಟರ್ ಮನೆಗೆ ಶೂಟೌಟ್ ನಡೆಸಿದ ಪ್ರಕರಣ ಸಹಿತ ಒಟ್ಟು 14 ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. ಈತನ ವಿರುದ್ಧ ಮಂಗಳೂರು ಉತ್ತರ, ಬರ್ಕೆ, ಉಳ್ಳಾಲ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ವಾರಂಟ್ ಜಾರಿಯಲ್ಲಿದೆ.
ಇನ್ನೋರ್ವ ಆರೋಪಿ ಮೊಹಮ್ಮದ್ ರಫೀಕ್ ಮುಡಿಪು ರಫೀಕ್ ಎಂಬಾತನ ವಿರುದ್ಧ ಮಂಗಳೂರು ನಗರದ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ, ಬರ್ಕೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಮಹಿಳಾ ಠಾಣೆಯಲ್ಲಿ ಪೋಕ್ಸೋ ಪ್ರಕರಣ, ಮಂಗಳೂರು ಪೂರ್ವ ಠಾಣೆಯಲ್ಲಿ ದರೋಡೆಗೆ ಸಂಚು ರೂಪಿಸಿದ ಪ್ರಕರಣ, ಕೊಣಾಜೆ ಠಾಣೆಯಲ್ಲಿ ಅಪಹರಣ ಪ್ರಕರಣ, ದೇವಸ್ಥಾನ ಕಳವು ಪ್ರಕರಣ ಹಾಗೂ ಹಲ್ಲೆ ಪ್ರಕರಣ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ಹಾಗೂ ಕೇರಳದ ಮಂಜೇಶ್ವರ, ಕಣ್ಣೂರು ನಗರ ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣ ಹೀಗೆ ಒಟ್ಟು 9 ಪ್ರಕರಣಗಳು ದಾಖಲಾಗಿರುತ್ತದೆ.
ಸಿಸಿಬಿ ಘಟಕದ ಎಸಿಪಿ ಗೀತಾ ಡಿ ಕುಲಕರ್ಣಿ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಎಚ್.ಎಂ., ಸಿಸಿಬಿ ಪಿಎಸ್‌ಐ ನರೇಂದ್ರ, ಶರಣಪ್ಪ ಭಂಡಾರಿ, ಹರೀಶ್ ಪದವಿನಂಗಡಿ, ಎಎಸ್‌ಐ ಮೋಹನ್ ಕೆ ವಿ, ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಘಟಕದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದವರು ವಿವರಿಸಿದರು.