

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಮಳೆ ದೂರ ಸರಿದಿರುವ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕಿನ ಬಹುತೇಕ ಕಡೆಗಳಲ್ಲಿ ಭತ್ತ ಕಟಾವು ಕಾರ್ಯ ಮುಗಿದಿದೆ. ಆದರೆ ಭತ್ತಕ್ಕೆ ಬೆಂಬಲ ಬೆಲೆ ನಿಗದಿಪಡಿಸಿ ಆದೇಶ ಹೊರಬಿದ್ದರೂ ತಾಲೂಕಿನಲ್ಲಿ ಇನ್ನೂ ಭತ್ತ ಖರೀದಿ ಕೇಂದ್ರ ಆರಂಭಗೊಂಡಿಲ್ಲ.
ಸರ್ಕಾರ ಭತ್ತಕ್ಕೆ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿಗೆ ಅಧಿಸೂಚನೆ ಹೊರಡಿಸಿದ್ದು, ಜನವರಿಯಿಂದಲೇ ಖರೀದಿ ಆರಂಭವಾಗಲಿದೆ. ಕಟಾವುಗೊಂಡ ಭತ್ತ ಗದ್ದೆಯಿಂದಲೇ ನೇರವಾಗಿ ಮಿಲ್‌ಗೆ ಭತ್ತ ಹೋಗುತ್ತಿದ್ದು, ಭತ್ತವನ್ನು ತಾನೇ ಶೇಖರಿಸಿಡುವ ವ್ಯವಸ್ಥೆಯನ್ನು ಈ ಭಾಗದ ಯಾವ ರೈತರು ಹೊಂದಿಲ್ಲ. ಮಿಲ್ ಮಾಲೀಕರು ಕೂಡ ಭತ್ತದ ಕೆಜಿಗೆ 22 ರೂ. ದರ ನಿಗದಿಪಡಿಸಿದ್ದು, ಈ ದರದಲ್ಲಿ ರೈತ ಲಾಭಕ್ಕಿಂತ ನಷ್ಟಕ್ಕೊಳಗಾಗುವುದೇ ಹೆಚ್ಚು.
ಕಟಾವಿಗೆ ತಾಸಿಗೆ 2400 ರೂ., ಯಂತ್ರ ನಾಟಿ, ಗೊಬ್ಬರ, ಕೂಲಿ ಕಾರ್ಮಿಕರ ಸಂಬಳ ಸೇರಿದಂತೆ ಭತ್ತ ಕೃಷಿಗೆ ಆಗುವ ಖರ್ಚು ರೈತನಿಗೆ ಹೊರೆಯಾಗುತ್ತಿದೆ. ಭತ್ತ ಬೆಳೆಯುವ ಕೃಷಿಕರ ಕಷ್ಟವನ್ನು ಆಡಳಿತ ವರ್ಗ ಇನ್ನೂ ಅರಿತುಕೊಂಡಿಲ್ಲ ಎಂದು ಭತ್ತ ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಭತ್ತಕ್ಕೆ ಸಾಮಾನ್ಯ ದರ 2300 ರೂ., ಗ್ರೇಡ್ ಎ ಭತ್ತಕ್ಕೆ ದರ 2320 ರೂ. ನಿಗದಿಪಡಿಸಿದೆ. ಭತ್ತ ಖರೀದಿಗೆ ಕರ್ನಾಟಕ ಆಹಾರ ನಿಗಮವನ್ನು ಏಜೆನ್ಸಿಯಾಗಿ ನೇಮಿಸಲಾಗಿದೆ.
ನ.15ರಿಂದ ಡಿ.31ರ ತನಕ ರೈತರಿಗೆ ನೋಂದಣಿಗೆ ಅವಕಾಶ ನೀಡಲಾಗಿದ್ದು, 2025ರ ಜ.1ರಿಂದ ಮಾ.31ರ ತನಕ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಭತ್ತ ಬೆಳೆಗಾರರು ಫ್ರೂಟ್ಸ್ ತಂತ್ರಾಂಶದಲ್ಲಿ ಸೇರ್ಪಡೆಗೊಂಡು ತಂತ್ರಾಂಶದಲ್ಲಿ ಗುರುತಿನ ಸಂಖ್ಯೆ, ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಯ ಮಾಹಿತಿಯೊಂದಿಗೆ ನೊಂದಣಿ ಕೇಂದ್ರ ಮೂಲಕ ನೋಂದಾಯಿಸಿಕೊಳ್ಳಬೇಕು.
ಭತ್ತಕ್ಕೆ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿಗೆ ಹೊರಡಿಸಿರುವ ಅಧಿಸೂಚನೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ. ಕೃಷಿ ಮಾಡುವುದೇ ಸವಾಲು ಎನಿಸಿರುವ ಈ ಹಂತದಲ್ಲಿ ಕಟಾವು ಮಾಡಿದ ಭತ್ತವನ್ನು ಮನೆಯಲ್ಲಿ ಸಂಗ್ರಹಿಸಿ ಇಡುವುದು ಕಡಿಮೆಯಾಗಿದೆ. ರೈತರು ನೇರವಾಗಿ ಭತ್ತವನ್ನು ಮಿಲ್‌ಗೆ ಕೊಡುತ್ತಿದ್ದಾರೆ. ಮಿಲ್‌ನ ದರವೂ ಅತಿ ಕಡಿಮೆಯಾಗಿದೆ. ವಿಜಯ ಪೂಜಾರಿ ಕೃಷಿಕ https://www.vijayavani.net/friendship-trophy-invitational-release https://www.vijayavani.net/seniors-need-entertainment