ಮೂಲ ಸೌಲಭ್ಯಗಳಿಗೆ ಕೊರತೆಯಾಗದಂತೆ ಜಾಗೃತೆ ವಹಿಸಿ

19.Pyp. 001
Published on

ಪಿರಿಯಾಪಟ್ಟಣ: ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಲಭ್ಯಗಳಿಗೆ ಕೊರತೆಯಾಗದಂತೆ ಅಧಿಕಾರಿಗಳು ಜಾಗೃತೆ ವಹಿಸಿ ಎಂದು ಸಚಿವ ಕೆ.ವೆಂಕಟೇಶ್ ತಿಳಿಸಿದರು.

ತಾಲೂಕಿನ ಮುತ್ತೂರು ಕೊಪ್ಪಲು ಗ್ರಾಮದಲ್ಲಿ ನೂತನ ರಸ್ತೆ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ, ಗುಣಮಟ್ಟದ ರಸ್ತೆ ಮತ್ತು ಚರಂಡಿ ನಿರ್ಮಾಣ, ಸಮರ್ಪಕವಾದ ವಿದ್ಯುತ್ ಪೂರೈಕೆ, ಕೆರೆಗಳ ದುರಸ್ತಿ, ಜಮೀನುಗಳಿಗೆ ತೆರಳುವ ರಸ್ತೆ ಅಭಿವೃದ್ಧಿ  ಸೇರಿದಂತೆ ಸಾರ್ವಜನಿಕರಿಂದ ಬಹುತೇಕ ಕಡೆಗಳಲ್ಲಿ ಮನವಿಗಳು ಬರುತ್ತಿದ್ದು ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಪಶು ಸಂಗೋಪನೆ ಮತ್ತು ಹೈನುಗಾರಿಕೆಯನ್ನು ಹೆಚ್ಚು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಈ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಮಾಹಿತಿ ನೀಡುವ ಕೆಲಸವಾಗಬೇಕಿದೆ ಎಂದರು. ತಾಲೂಕಿನಲ್ಲಿ ಕಳೆದ ಮೂರು ನಾಲ್ಕು ತಿಂಗಳಿಗಳಿಂದ ನಿರಂತರವಾಗಿ ಮಳೆ ಯಾಗಿದ್ದರಿಂದ ಬಹುತೇಕ ಕಡೆಗಳಲ್ಲಿ ರಸ್ತೆಗಳು ಹಾಳಾಗಿರುವುದಾಗಿ ಸಾರ್ವಜನಿಕರಿಂದ ದೂರುಗಳು ಬಂದಿದ್ದು ಇನ್ನೊಂದು ತಿಂಗಳಿನಲ್ಲಿ ತಾಲೂಕಿನಲ್ಲಿ ಎಲ್ಲಾ ರಸ್ತೆಗಳನ್ನು ದುರಸ್ತಿಪಡಿಸುವುದಾಗಿ ಭರವಸೆ ನೀಡಿದರು. ತಾಲೂಕಿನಲ್ಲಿ ವ್ಯಾಪಕವಾಗಿ ಮಳೆಯಾಗಿದ್ದರಿಂದ ಬಹುತೇಕ ಎಲ್ಲಾ ಗ್ರಾಮಗಳಲ್ಲೂ ಕೆರೆ ಕಟ್ಟೆಗಳು ಭರ್ತಿಯಾಗಿದ್ದು ಅಂತರ್ಜಲ ವೃದ್ಧಿಯಾಗಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಬಗೆಹರಿದಿದೆ ಎಂದರು. ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಬಸ್ ಸಂಪರ್ಕ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net