ಪೀರಲ ದೇವರಿಗೆ ಭಕ್ತಿ ಸಮರ್ಪಣೆ: ಕೂಡ್ಲಿಗಿಯಲ್ಲಿ ವಿವಿಧ ವೇಷ ತೊಟ್ಟು ಕುಣಿದಾಡಿದ ಭಕ್ತರು

kdl
ಕೂಡ್ಲಿಗಿಯ 12ನೇ ವಾರ್ಡ್‌ನಲ್ಲಿ ಪೀರಲ ದೇವರ ದರ್ಶನ ಪಡೆದ ಭಕ್ತರು
Published on

ಕೂಡ್ಲಿಗಿ: ಪಟ್ಟಣ ಸೇರಿ ತಾಲೂಕಿನಾದ್ಯಂತ ಸಡಗರ ಸಂಭ್ರಮದಿಂದ ಮೊಹರಂ ಆಚರಿಸಲಾಯಿತು.


ಐದು ದಿನಗಳಿಂದ ಗ್ರಾಮೀಣ ಭಾಗಗಳಲ್ಲಿ ಪೀರಲ ದೇವರ ಕಟ್ಟೆ ಮುಂದೆ ಅಲಾಯಿ ಕುಣಿ ತೆಗೆದು, ಹರಕೆ ಹೊತ್ತ ಭಕ್ತರು ನಾನಾ ವೇಷಧಾರಿಗಳಾಗಿ ಪೀರಲ ಸ್ವಾಮಿಗೆ ಭಕ್ತಿ ಸಮರ್ಪಿಸಿದರು. ಹುಲಿ, ಹಸೇನ್- ಹುಸೇನ್ ಸೇರಿ ಅನೇಕ ಬಗೆಯ ಪೋಷಾಕು ಹಾಕಿ ಹಲಗೆ ನಾದಕ್ಕೆ ಕುಣಿದಾಡಿದರು.


ಜನರು ಕುಟುಂಬದ ಸಮೇತ ಬಂದು ಪೀರಲ ದೇವರ ದರ್ಶನ ಮಾಡಿ ಅಲಾಯಿ ಕುಣಿಗೆ ಹೊತ್ತ ಹರಕೆಯಂತೆ ಉಪ್ಪು ಹಾಕಿದರು. ಜತೆಗೆ ಪೀರಲ ದೇವರಿಗೆ ಬೆಲ್ಲದ ಚೂರ್ಣ(ಸಕ್ಕರೆ ಮಿಶ್ರಣ) ನೈವೇದ್ಯ ಮಾಡಿ ಪರಸ್ಪರ ಹಂಚಿ ಸಂಭ್ರಮಿಸಿದರು. ಅಲ್ಲದೆ ಅಗ್ನಿಕೊಂಡ ಹಾಯ್ದು ಭಕ್ತಿ ಸಮರ್ಪಿಸಿದರು.


ಶನಿವಾರ ಬೆಳಗ್ಗೆಯಿಂದ ಸಂಜೆ ವರೆಗೂ ಪೀರಲ ಸ್ವಾಮಿಯ ನಾನಾ ಪೋಷಾಕು ಹಾಕಿದ್ದ ಹುಲಿ ವೇಷಧಾರಿಗಳು ಹಲಗೆಯ ನಾದಕ್ಕೆ ಕುಣಿದು ಕುಪ್ಪಳಿಸಿದರು. ಸಂಜೆ ಪೀರಲ ಸ್ವಾಮಿಯ ಮೆರವಣಿಗೆ ಪಟ್ಟಣದ ಹೊಸಪೇಟೆ ರಸ್ತೆಯ ಮೂಲಕ ಆಂಜನೇಯ ದೇವಸ್ಥಾನ, ಹಳೆಯ ಸಂತೆ ಮಾರ್ಕೆಟ್ ಮೂಲಕ ದರ್ಗಾ ಬಳಿ ಬಾವಿಯಲ್ಲಿ ಪೂಜೆ ಮಾಡಿ ಪೀರಲ ದೇವರುಗಳನ್ನು ವಿಸರ್ಜನೆ ಮಾಡಿದರು.


ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ನೇತೃತ್ವದಲ್ಲಿ ಬಂದೋಬಸ್ತ್ ಒದಗಿಸಲಾಗಿತ್ತು. ಪಿಎಸ್‌ಐ ಎಂ.ಧನಂಜಯ ಸೇರಿ ಪೊಲೀಸ್ ತುಕಡಿ ಹಾಗೂ ಗೃಹರಕ್ಷಕ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net