

ಶಿಗ್ಗಾಂವಿ: ಇಂಜಿನಿಯರ್, ಗುತ್ತ್ತಿಗೆದಾರರ ನಿರ್ಲಕ್ಷೃದಿಂದಾಗಿ ವರ್ಷ ಕಳೆದರೂ ಶಿಗ್ಗಾಂವಿ, ಬಂಕಾಪುರ, ಸವಣೂರ ಪಟ್ಟಣಗಳಲ್ಲಿ ಪೈಪ್‌ಲೈನ್ ಕಾಮಗಾರಿ ಮುಗಿಯುತ್ತಿಲ್ಲ. ಸಿಸಿ, ಡಾಂಬರ್ ರಸ್ತೆಗಳನ್ನು ಯದ್ವಾ-ತದ್ವಾ ಅಗೆದು ಹಾಳುಗೆಡವಲಾಗಿದೆ. ಮಳೆಗಾಲದಲ್ಲಿ ರಸ್ತೆಗಳು ಕೆಸರುಮಯವಾಗಿ ಸಂಚಾರಕ್ಕೆ ಬಾರದಂತಾಗಿದ್ದು ಜನ ನಮ್ಮನ್ನು ಶಪಿಸುತ್ತಿದ್ದಾರೆ ಎಂದು ಶಾಸಕ ಯಾಸೀರಖಾನ್ ಪಠಾಣ ಇಂಜಿನಿಯರರನ್ನು ತರಾಟೆಗೆ ಪಡೆದರು.
ಪಟ್ಟಣದ ತಾಪಂ ಸಭಾ ಭವನದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿದ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಒಂದೆಡೆ ಕಾಮಗಾರಿ ನಡೆಯುತ್ತಿದ್ದರೆ ಮತ್ತೊಂದೆಡೆ ಜನರ ಸಂಚಾರಕ್ಕೆ ದಾರಿ ಕೊಡಬೇಕು. ಕೆಲಸ ಮುಗಿದ ಬಳಿಕ ತೆಗ್ಗು ಮುಚ್ಚುವ ಕನಿಷ್ಠ ಮಾನವೀಯತೆಯೂ ನಿಮಗಿಲ್ಲವೆ? ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾರಾಯಣಪುರ ಕೆಪಿಎಸ್ ಅಧ್ಯಕ್ಷ ನಾನಾಗಿದ್ದರೂ ಇಲ್ಲಿವರೆಗೂ ಅಲ್ಲಿ ನಡೆದ ಕಾಮಗಾರಿಗಳ ಬಗ್ಗೆ ಗಮನಕ್ಕೆ ತಂದಿಲ್ಲ. ಕೊಠಡಿಗಳ ನಿರ್ಮಾಣ ಕಾಮಗಾರಿ ನೆಪದಲ್ಲಿ ಬ್ಯಾಂಕ್‌ನಲ್ಲಿ ಪ್ರತಿ ತಿಂಗಳು ಲಕ್ಷಾಂತರ ರೂ. ತೆಗೆದಿದ್ದಾರೆ. ತಪ್ಪಿತಸ್ಥ ಶಿಕ್ಷಕ ಯಾರು? ಅವರ ಮೇಲೆ ದೂರು ದಾಖಲಿಸಿ, ತನಿಖೆ ನಡೆಸಲು ಬಿಇಒಗೆ ಶಾಸಕರು ಸೂಚಿಸಿದರು. ಶಾಸಕನಾಗಿ ಬರುವ ನವಂಬರ್‌ಗೆ ವರ್ಷವಾಗಲಿದೆ. ವರ್ಷಾಚರಣೆ ಪ್ರಯುಕ್ತ ಕಂದಾಯ, ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿಕೊಂಡ 5 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಗುರಿಯಿದೆ. ಅಧಿಕಾರಿಗಳು ಜಂಟಿ ಸರ್ವೇ ಕಾರ್ಯಕೈಗೊಂಡು ಹಕ್ಕುಪತ್ರ ವಿತರಣೆಗಿರುವ ಕಾನೂನು ತೊಡಕು ನಿವಾರಿಸಬೇಕು ಎಂದು ಸೂಚಿಸಿದರು. ಶಿಗ್ಗಾಂವಿ ಕ್ಷೇತ್ರದ ಉಸ್ತುವಾರಿ ರವಿ ತಿರ್ಲಾಪುರ, ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡುವ ಬಗೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಕೈಗೊಳ್ಳುವ ಕ್ರಮಗಳ ಕುರಿತು ವಿಶೇಷವಾಗಿ ಪಾಠ ಮಾಡಿ ಗಮನ ಸೆಳೆದರು. ಸಭೆಯಲ್ಲಿ ವಿವಿಧ ಇಲಾಖೆ ಪ್ರಗತಿ ಪರಿಶೀಲಿಸಲಾಯಿತು. ಎಸಿ ಶುಭಂ ಶುಕ್ಲಾ, ತಹಸೀಲ್ದಾರ್ ರವಿಕುಮಾರ ಕೊರವರ, ಇಒ ಮಂಜುನಾಥ ಸಾಳಂಕಿ, ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಗುಡ್ಡಪ್ಪ ಜಲದಿ, ಎಸ್.ಎಫ್. ಮಣಕಟ್ಟಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಕಂಬಾಳಿಮಠ, ಕೆಎಂಎಫ್ ನಿರ್ದೇಶಕ ಶಂಕರಗೌಡ ಪಾಟೀಲ, ನಾಮನಿರ್ದೇಶಿತ ಸದಸ್ಯರಾದ ಬಸವರಾಜ ರಾಗಿ, ಬಾಬಾರ ಬುವಾಜಿ ಇತರರು ಉಪಸ್ಥಿತರಿದ್ದರು. ಸುಮ್ಮನೆ ಬಿಡುವುದಿಲ್ಲ... ವಿವಿಧ ಯೋಜನೆಯಡಿ 2022-23ನೇ ಸಾಲಿನಲ್ಲಿ ನಡೆದಿದೆ ಎನ್ನಲಾದ ತಾಲೂಕಿನ ವಿವಿಧ ರಸ್ತೆಗಳ ಅಭಿವೃದ್ಧಿ ನೆಪದಲ್ಲಿ ಜಿಪಂ ಇಂಜಿನಿಯರ್, ಗುತ್ತಿಗೆದಾರರಿಗೆ 15 ಕೋಟಿ ರೂ. ಬಿಲ್ ಪಾವತಿಸಲಾಗಿದೆ. ಅಭಿವೃದ್ಧಿಪಡಿಸಿದ ರಸ್ತೆಗಳು ಎಷ್ಟೇ ಹುಡುಕಿದರೂ ಎಲ್ಲಿಯೂ ಕಾಣಸುತ್ತಿಲ್ಲ. ಈ ಕುರಿತು ತನಿಖೆ ನಡೆಸಿ, ಕಾಮಗಾರಿ ನೆಪದಲ್ಲಿ ಅವ್ಯವಹಾರದಲ್ಲಿ ಭಾಗಿಯಾದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಶಾಸಕ ಯಾಸೀರಖಾನ್ ಪಠಾಣ ಎಚ್ಚರಿಸಿದರು.