

ಮೂಲ್ಕಿ: ಮೂಲ್ಕಿ-ಮೂಡಬಿದಿರೆ ರಾಜ್ಯ ಹೆದ್ದಾರಿ ಮೂಲ್ಕಿಯಿಂದ ಕಿನ್ನಿಗೋಳಿಗೆ ಹೋಗುವ ರಸ್ತೆಯಲ್ಲಿ ಸುಮಾರು 18 ಕೋಟಿ ರೂ. ವೆಚ್ಚದ ಅಮೃತ್ ಕುಡಿಯುವ ನೀರಿನ ಯೋಜನೆ ಕಾಮಗಾರಿ ನಡೆದಿದ್ದು, ಅಗೆದಿರುವ ಗುಂಡಿ ಸರಿಯಾಗಿ ಮುಚ್ಚದೆ ಮಣ್ಣು ಸಡಿಲಗೊಂಡು ರಸ್ತೆ ಅಲ್ಲಲ್ಲಿ ಕುಸಿಯುವ ಮೂಲಕ ಪ್ರಯಾಣ ಅಪಾಯಕಾರಿಯಾಗಿದೆ.
ಕಾಮಗಾರಿ ನಡೆಯುತ್ತಿರುವ ಸಂದರ್ಭ ಭಾರಿ ಮಳೆಯಾಗಿದ್ದು, ಕಾಮಗಾರಿ ಅರ್ಧದಲ್ಲಿ ನಿಂತು ಕೆಲ ಕಡೆ ಹೆದ್ದಾರಿ ಕುಸಿತದ ಭೀತಿ ಎದುರಾಗಿದೆ.
ಹೆದ್ದಾರಿಯ ಕುಬೆವೂರು ತಿರುವಿನಲ್ಲಿ ಪೈಪ್‌ಲೈನ್‌ಗೆ ಅಗೆದ ಚರಂಡಿ ಹಾಗೆ ಬಿಟ್ಟಿದ್ದು ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಪೈಪ್‌ಲೈನ್ ಅವಾಂತರದಿಂದ ಕೆಲವೆಡೆ ಹೆದ್ದಾರಿ ಕೂಡ ಹೊಂಡ-ಗುಂಡಿಗಳಿಂದ ತುಂಬಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಕಾಮಗಾರಿಗೆ ತಂದ ಪೈಪ್‌ಗಳನ್ನು ಕುಬೆವೂರು ಹೆದ್ದಾರಿ ಬದಿ ಚರಂಡಿಯಲ್ಲಿ ಹಾಕಿರುವುದರಿಂದ ಮಳೆ ನೀರು ಹರಿದು ಹೋಗಲು ತೊಂದರೆಯಾಗಿದೆ.
ಕೂಡಲೇ ಲೋಕೋಪಯೋಗಿ ಇಲಾಖೆ ಎಚ್ಚೆತ್ತು ಈ ಭಾಗದಲ್ಲಿ ಸೂಕ್ತ ಚರಂಡಿ ನಿರ್ಮಿಸಬೇಕು ಹಾಗೂ ಪೈಪ್‌ಲೈನ್ ಗುತ್ತಿಗೆದಾರರಿಗೆ ಕಾಮಗಾರಿ ಸರಿಪಡಿಸುವಂತೆ ಸೂಚನೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.