

ಹನೂರು: ರೈತರ ಬಹುದಿನಗಳ ಬೇಡಿಕೆಯ ಕನಸು ರಾಮನಗುಡ್ಡೆ ಕೆರೆಗೆ ನೀರು ಹರಿಸುವುದು ಪೈಪ್‌ಲೈನ್ ಕಾಮಗಾರಿ ಮೂಲಕ ನನಸಾಗುತ್ತಿದೆ. ಮುಂದಿನ ದಿನಗಳಲ್ಲಿ ರೈತರಿಗೆ ನೀರಾವರಿ ಸೌಕರ್ಯ ದೊರೆಯಲಿದೆ ಎಂದು ಶಾಸಕ ಎಂ.ಆರ್ . ಮಂಜುನಾಥ್ ತಿಳಿಸಿದರು.
ತಾಲೂಕಿನ ಬೂದುಬಾಳು ಗ್ರಾಮ ಸಮೀಪದಲ್ಲಿನ ಕಾವೇರಿ ನೀರು ಸರಬರಾಜು ಘಟಕದ ಬಳಿ ಸೋಮವಾರ ರಾಮನಗುಡ್ಡೆ ಡ್ಯಾಂಗೆ ನೀರು ತುಂಬಿಸುವ ಉದ್ದೇಶದಿಂದ ಕೈಗೆತ್ತಿಕೊಂಡಿರುವ ಪೈಪ್‌ಲೈನ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರಾಮನಗುಡ್ಡೆ ಕೆರೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಹೆಚ್ಚಿನ ರೈತರು ಕೃಷಿ ಮಾಡುತ್ತಿದ್ದಾರೆ. ಆದರೆ ಬೇಸಿಗೆಯ ವೇಳೆ ನೀರು ಬರಿದಾಗುತ್ತಿತ್ತು. ಇದರಿಂದ ಕೃಷಿಗೆ ತೊಡಕಾಗಿತ್ತು. ಕೆರೆಗೆ ನದಿ ಮೂಲದಿಂದ ನೀರು ತುಂಬಿಸುವುದು ಈ ಭಾಗದ ರೈತರ ಮುಖ್ಯ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬೂದುಬಾಳು ಗ್ರಾಮದ ಸಮೀಪದ ನೀರು ಘಟಕದಿಂದ ಕೆರೆಗೆ ನೀರು ಹರಿಸಲು ಉದ್ದೇಶಿಸಲಾಗಿದ್ದು, 2.5 ಕೋಟಿ ರೂ. ವೆಚ್ಚದ ಪೈಪ್‌ಲೈನ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುತ್ತಿದೆ. ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಂದು ತಿಂಗಳೊಳಗೆ ನೀರು ಹರಿಸಲು ಕ್ರಮ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗುವ ಜತೆಗೆ ಕೃಷಿಗೆ ಸಮರ್ಪಕ ನೀರಾವರಿ ಸೌಕರ್ಯ ದೊರೆಯಲಿದೆ. ಜತೆಗೆ ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ, ತೊಮಿಯಾರ್‌ಪಾಳ್ಯ, ಕೆವಿಎನ್ ದೊಡ್ಡಿ, ಎಂ.ಟಿ. ದೊಡ್ಡಿ ಹಾಗೂ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಲಿದ್ದು, ರೈತರ ಕೃಷಿಗೂ ಅನುಕೂಲವಾಗಲಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಕೆರೆ-ಕಟ್ಟೆಗಳಿಗೂ ನೀರು ಹರಿಸಲಾಗುವುದು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಬೆಂಬಲ ನೀಡಬೇಕು
ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ರಾಜಕೀಯದಲ್ಲಿ ಪ್ರಮಾಣಿಕತೆ ಇಲ್ಲ ಎಂಬುದನ್ನು ಅರಿತು ರೈತರ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಹೋರಾಟ ಮಾಡುತ್ತಲೇ ಇದ್ದೇವೆ. ಹನೂರು ಕ್ಷೇತ್ರದಲ್ಲಿ ಕಾವೇರಿ ನದಿ ಹರಿಯುತ್ತಿದ್ದರೂ ನೀರು ತಮಿಳುನಾಡಿಗೆ ಹರಿಯುತ್ತದೆ. ಇದರಿಂದ ಕ್ಷೇತ್ರದ ಜನರಿಗೆ ನೀರಿನ ಉಪಯೋಗವಾಗುತ್ತಿಲ್ಲ. ಇದನ್ನು ಮನಗಂಡ ಶಾಸಕ ಎಂ.ಆರ್ . ಮಂಜುನಾಥ್ ಅವರು ರೈತರ ಸಂಕಷ್ಟಕ್ಕೆ ಸ್ಪಂದಿಸಿ ಸ್ವಾತಂತ್ರ್ಯ ಪಡೆದು 76 ವರ್ಷ ಕಳೆದರೂ ಆಗದ ಕೆಲಸವನ್ನು ಈಡೇರಿಸುತ್ತಿದ್ದು, ದಾರಿದೀಪವಾಗಿದ್ದಾರೆ. ಆದ್ದರಿಂದ ಇವರ ಕಾರ್ಯಕ್ಕೆ ರೈತರು ಬೆಂಬಲ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಪಿಎಸಿಸಿ ನಿರ್ದೇಶಕ ಮಂಜೇಶ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ, ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್, ಹಸಿರು ಸೇನೆಯ ಚಂಗಡಿ ಕರಿಯಪ್ಪ, ನೀರಾವರಿ ನಿಗಮದ ಇಂಜಿನಿಯರ್‌ಗಳಾದ ಮಹೇಶ್, ಉಮೇಶ್, ಕರುಣಾಮಯಿ, ರಾಮಕೃಷ್ಣ, ಮುಖಂಡರಾದ ಮಂಗಲ ಚಿಕ್ಕಸ್ವಾಮಿ, ವೆಂಕಟೇಶ್, ವಿಜಯಕುಮಾರ್, ಜಸ್ಸೀಂಪಾಷ ಇತರರು ಇದ್ದರು.