ಮೂರು ವರ್ಷದಲ್ಲಿ 30 ಲಕ್ಷ ಮನೆಗಳಿಗೆ ನಳ ಸಂಪರ್ಕ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

25SGN(GR)01
Published on

ಶಿಗ್ಗಾಂವಿ(ಗ್ರಾ): ಕಳೆದ 75 ವರ್ಷಗಳಲ್ಲಿ ಕೇವಲ 25 ಲಕ್ಷ ಗ್ರಾಮೀಣ ಪ್ರದೇಶದ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಕೇವಲ ಮೂರು ವರ್ಷದಲ್ಲಿ 30 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ನಳದ ಸಂಪರ್ಕ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲೂಕಿನ ಕುಂದೂರ ಗ್ರಾಮದಲ್ಲಿ ಶುಕ್ರವಾರ ಪಶು ಆಸ್ಪತ್ರೆ ನಿರ್ವಣಕ್ಕೆ ಶಂಕುಸ್ಥಾಪನೆ ಮತ್ತು ಸರ್ಕಾರಿ ಹೆಣ್ಣು ಮಕ್ಕಳ ಹಾಗೂ ಉರ್ದು ಶಾಲೆಯ ನೂತನ ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಗ್ಗಾಂವಿ ತಾಲೂಕಿನ ಬಹುತೇಕ ಗ್ರಾಮಗಳಿಗೆ ಜೆಜೆಎಂ ಯೋಜನೆಯ ಮೂಲಕ ತುಂಗಭದ್ರಾ ನದಿಯ ನೀರನ್ನು ಒದಗಿಸುವ ಬೃಹತ್ ಯೋಜನೆ ರೂಪಿಸಲಾಗಿದೆ. ಆದರೆ, ಕಾಮಗಾರಿಗಳ ಗುತ್ತಿಗೆದಾರರಿಗೆ ಇಂದಿನ ಸರ್ಕಾರ ಹಣ ನೀಡದ ಕಾರಣ ಕಾಮಗಾರಿ ನಿಂತಿದೆ. ಕೇಂದ್ರ ಸರ್ಕಾರ ತನ್ನ ಮೊದಲ ಮೂರು ತಿಂಗಳ ಕಂತನ್ನು ಪಾವತಿಸಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ವಂತಿಕೆಯನ್ನು ನೀಡಿದರೆ ಜೆಜೆಎಂ ಯೋಜನೆ ಕೆಲಸ ಮತ್ತೆ ಪ್ರಾರಂಭಗೊಳ್ಳುತ್ತದೆ. ಈ ಕುರಿತು ಹಿರಿಯ ಅಧಿಕಾರಿಗಳಿಗೆ ಮಾತನಾಡಿ, ಅತಿ ಶೀಘ್ರದಲ್ಲಿ ಕೆಲಸ ಪ್ರಾರಂಭ ಮಾಡಲಾಗುವುದು ಎಂದರು.

ಸರ್ಕಾರ ಪಿಯು ಕಾಲೇಜಗಳಿಗೆ ಮಂಜೂರಾತಿ ನೀಡಿದರೆ ಕುಂದೂರ ಗ್ರಾಮಕ್ಕೆ ಮುಂದಿನ ಶೈಕ್ಷಣಿಕ ವರ್ಷದಿಂದ ಪಿಯು ಕಾಲೇಜ ಆರಂಭಿಸಲಾಗುವುದು. ಇದರ ಜತೆಗೆ ರೈತರ ಆರ್ಥಿಕ ವ್ಯವಸ್ಥೆಗೆ ಅನುಕೂಲವಾಗಲು ಗ್ರಾಮಕ್ಕೆ ರಾಷ್ಟ್ರೀಕೃತ ಬ್ಯಾಂಕ್ ಬೇಡಿಕೆಗೆ ಚಾಲನೆ ನೀಡಲಾಗುವುದು. ಗ್ರಂಥಾಲಯಕ್ಕೆ ನೂತನ ಕಟ್ಟಡ ಹಾಗೂ ಗ್ರಾಮದ ದುರ್ಗಾದೇವಿ, ಈಶ್ವರ ದೇವಸ್ಥಾನಗಳ ನಿರ್ಮಾಣ ಕೆಲಸ ಒಂದು ವಾರದಲ್ಲಿ ಆರಂಭಿಸಲಾಗುವುದು. ಕುಂತಾದೇವಿ ದೇವಸ್ಥಾನಕ್ಕೆ ಮುಜರಾಯಿ ಇಲಾಖೆ ಅನುದಾನ ನೀಡದಿದ್ದಲ್ಲಿ ನನ್ನ ಶಾಸಕತ್ವದ ಅನುದಾನದಲ್ಲಿ ದೇವಸ್ಥಾನ ನಿರ್ವಿುಸಲಾಗುವುದು. ಅಂಜುಮನ್ ಸಂಸ್ಥೆಯ ಶಾದಿಮಹಲ್​ಗೆ ವಕ್ಪ್ ಬೋರ್ಡ್​ನಿಂದ ಹಣ ಬಿಡುಗಡೆ ಮಾಡಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವನಗೌಡ ಪಾಟೀಲ, ಉಪಾಧ್ಯಕ್ಷೆ ಕಸ್ತೂರೆವ್ವ ಕಬನೂರ, ಬಿಇಒ ಎ.ಎ. ಅಂಬಿಗೇರ, ಪಶುವೈದ್ಯ ಡಾ. ರಾಜೇಂದ್ರ ಅರಳೇಶ್ವರ, ತಾಪಂ ಮಾಜಿ ಸದಸ್ಯ ವಿಶ್ವನಾಥ ಹರವಿ, ಶಿವಾನಂದ ಮ್ಯಾಗೇರಿ, ನರಹರಿ ಕಟ್ಟಿ, ಡಾ.ಮಲ್ಲೇಶಪ್ಪ ಹರಿಜನ, ರಮೇಶ ಆಲದಕಟ್ಟಿ, ಪ್ರವೀಣ ಹಾವಣಗಿ, ಮುತ್ತಕ್ಕ ಮರೆಮ್ಮನವರ, ಸೋಮವ್ವ ಹರಿಜನ, ಉಮೇಶ ಅಂಗಡಿ, ಷಣ್ಮುಖ ಕಾಳಣ್ಣವರ, ಮೀನಾಕ್ಷಿ ಗಿರಿಯಪ್ಪಗೌಡ್ರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net