ಕೇಬಲ್ ಅಳವಡಿಕೆ ವೇಳೆ ಕೊಳವೆಗೆ ಹಾನಿ: ಕೆಂಗೇರಿಯಲ್ಲಿ ನೀರು ಪೂರೈಕೆ ವ್ಯತ್ಯಯ

kengeriwater
Published on

ಬೆಂಗಳೂರು: ಕೆಂಗೇರಿ ಉಪನಗರದಲ್ಲಿ ಅನುಮತಿ ಇಲ್ಲದೆ ಆಪ್ಟಿಕ್ ಫೈಬರ್ ಕಂಪನಿಯೊಂದು ಕೇಬಲ್ ಅಳವಡಿಸುವ ವೇಳೆ ಮುಖ್ಯ ಕೊಳವೆಗೆ ಹಾನಿಯಾಗಿ 10 ಲಕ್ಷ ಲೀ. ಗೂ ಹೆಚ್ಚು ಪ್ರಮಾಣದ ಕಾವೇರಿ ನೀರು ಪೋಲಾಗಿದೆ. ಘಟನೆ ನಡೆದು ನಾಲ್ಕು ದಿನ ಕಳೆದಿದ್ದರೂ, ನೀರು ಪೂರೈಕೆ ಮರುಸ್ಥಾಪನೆಯಾಗದ ಕಾರಣ ಆ ಭಾಗದ 10 ಸಾವಿರಕ್ಕೂ ಹೆಚ್ಚು ಕುಟುಂಬಗಳು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಇಡೀ ಕೆಂಗೇರಿ ಉಪನಗರಕ್ಕೆ ಕಾವೇರಿ ನೀರು ಪೂರೈಸುವ ಬೃಹತ್ ಮುಖ್ಯ ಕೊಳವೆಗೆ ಹಾನಿಯಾಗಿದ್ದರೂ, ದುರಸ್ತಿ ಕಾರ್ಯ ಪೂರ್ಣಗೊಂಡಿಲ್ಲ. ಬದಲಿ ವ್ಯವಸ್ಥೆ ಸಮರ್ಪಕವಾಗಿ ನಡೆಯದ ಕಾರಣ ಜನರು ನೀರಿಗಾಗಿ ಬೋರ್‌ವೆಲ್ ಹಾಗೂ ಖಾಸಗಿ ಟ್ಯಾಂಕರ್‌ಗಳ ಮೊರೆ ಹೋಗಬೇಕಾಗಿದೆ. ನೀರು ಪೂರೈಕೆ ಯಥಾಸ್ಥಿತಿಗೆ ಬರಲು ಇನ್ನೂ ಎರಡು ದಿನ ಆಗಬಹುದು ಎಂದು ಜಲಮಂಡಳಿ ತಿಳಿಸಿದ್ದು ಅಲ್ಲಿಯವರೆಗೂ ಸಾರ್ವಜನಿಕರು ಕಾವೇರಿ ನೀರಿಲ್ಲದೆ ಅಲೆದಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಕಳೆದ ಶನಿವಾರ ಆ್ಯಕ್ಟ್ ಫೈಬರ್‌ನೆಟ್ ಕಂಪನಿ ಕೆಂಗೇರಿ ಉಪನಗರದ ರಾಬಿನ್ ಥಿಯೇಟರ್ ಬಳಿ ಹಾದುಹೋಗಿರುವ 600 ಮಿ.ಮೀ. ವ್ಯಾಸದ ಮುಖ್ಯಕೊಳವೆ ಬದಿ ಕೇಬಲ್ ಹಾಕಲು ರಸ್ತೆಅಗೆತ ಕೆಲಸ ಕೈಗೆತ್ತಿಕೊಂಡಿತ್ತು. ಆ ವೇಳೆ ಕಾರ್ಮಿಕರು ನೀರಿನ ಕೊಳವೆಗೆ ಹಾನಿ ಮಾಡಿದ್ದಾರೆ. ಕೇಬಲ್ ಹಾಕಲು ಕಂಪನಿಯು ಮುಂಚಿತವಾಗಿ ಬಿಬಿಎಂಪಿ ಅಥವಾ ಜಲಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ. ಎರಡನೇ ಶನಿವಾರ ಆಗಿದ್ದರಿಂದ ಕೇಬಲ್ ಕಂಪನಿ ಏಕಾಏಕಿ ಕಾಮಗಾರಿ ಕೈಗೆತ್ತಿಕೊಂಡಿತ್ತು ಎಂದು ಸ್ಥಳೀಯರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಶಾಸಕ ಸೂಚನೆ ಪಾಲನೆಗೆ ಬೆನ್ನು:

ಕಾವೇರಿ ನೀರಿನ ಮುಖ್ಯಕೊಳವೆಗೆ ಹಾನಿಯಾದ ಮಾಹಿತಿ ಪಡೆದು ಅಂದೇ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಸ್.ಟಿ.ಸೋಮಶೇಖರ್ ಅವರು ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದ್ದರು. ಇದರನ್ವಯ ಜಲಮಂಡಳಿಯ ಪಶ್ಚಿಮ ವಿಭಾಗದ ಅಧಿಕಾರಿಗಳು ಅ.4ರಂದೇ ಕೆಂಗೇರಿ ಠಾಣೆಗೆ ದೂರು ದಾಖಲಿಸಿದ್ದರು. ಆದರೂ ಎಫ್​ಐಆರ್ ಹಾಕಲಾಗಿಲ್ಲ. ಮಂಗಳವಾರ ಜಲಮಂಡಳಿ ಅಧಿಕಾರಿಗಳು ಮತ್ತೆ ಠಾಣಾಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಎ್ಐಆರ್ ದಾಖಲಿಸಿದ್ದರೂ, ದೂರುದಾರರ ವಿರುದ್ಧ ಕ್ರಮ ಕೈಗೊಳ್ಳುವ ಅಥವಾ ನೋಟಿಸ್ ನೀಡಿ ವಿಚಾರಣೆಗೆ ಕರೆಯಿಸುವ ಕೆಲಸ ಮಾಡದಿರುವುದು ಆರಕ್ಷಕರ ಮೇಲೆ ಒತ್ತಡ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಟ್ಯಾಂಕರ್ ನೀರಿಗೆ ಮೊರೆ:

ಮುಖ್ಯಕೊಳವೆಗೆ ಹಾನಿಯಾಗಿರುವ ಕಾರಣ ಕೆಂಗೇರಿ ಉಪನಗರದ ಹಲವು ಬಡಾವಣೆಗಳಲ್ಲಿ ಕಾವೇರಿ ನೀರು ಪೂರೈಕೆ ಸ್ಥಗಿತಗೊಂಡಿರುವ ಕಾರಣ ಜನತೆ ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ. ಬೋರ್‌ವೆಲ್ ಸೌಲಭ್ಯ ಇಲ್ಲದ ಮಂದಿ ಹೆಚ್ಚು ಹಣ ನೀಡಿ ಟ್ಯಾಂಕರ್‌ಗಳಿಂದ ನೀರು ಪಡೆಯುತ್ತಿದ್ದಾರೆ. ಇದರ ಹೊರತಾಗಿಯೂ ಜಲಮಂಡಳಿ ಕೆಲ ಬಡಾವಣೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಮುಂದಾಗಿದ್ದರೂ, ಸಮಸ್ಯೆಗೆ ಒಳಗಾಗಿರುವ ಎಲ್ಲ ಮನೆಗಳಿಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ.

16.5 ಲಕ್ಷ ರೂ. ದಂಡ !?:

ಕಾವೇರಿ ನೀರಿನ ಮುಖ್ಯ ಕೊಳವೆಗೆ ಹಾನಿ ಮಾಡಿರುವ ಆ್ಯಕ್ಷರ್ ಫೈಬರ್‌ನೆಟ್ ಕಂಪನಿಗೆ ನೋಟಿಸ್ ನೀಡಲು ಜಲಮಂಡಳಿ ಮುಂದಾಗಿದೆ. ಅನುಮತಿ ಇಲ್ಲದೆ ನೆಲ ಅಗೆದು ಪೈಪ್‌ಲೇನ್‌ಗೆ ಧಕ್ಕೆ ಉಂಟಾಗಿರುವುದಕ್ಕೆ ಸಾರ್ವಜನಿಕ ಆಸ್ತಿಗೆ ಹಾನಿಯುಂಟು ಮಾಡಿದ ಪ್ರಕರಣದಲ್ಲಿ 16.5 ಲಕ್ಷ ರೂ. ದಂಡ ವಿಧಿಸಲು ಅಧಿಕಾರಿಗಳು ಕಡತ ಸೃಷ್ಟಿಸಿ ಕಂಪನಿಗೆ ರವಾನಿಸಲು ಸಿದ್ಧತೆ ನಡೆಸಿದ್ದಾರೆ.

ನಾಲ್ಕೈದು ದಿನಗಳಿಂದ ಕಾವೇರಿ ನೀರು ಪೂರೈಕೆಯಾಗದೆ ನಮಗೆ ಭಾರೀ ತೊಂದರೆ ಆಗಿದೆ. ಕೊಳವೆ ಒಡೆದಿರುವ ವಿಚಾರ ತಡವಾಗಿ ತಿಳಿದ ಕಾರಣ ಟ್ಯಾಂಕರ್ ಮೂಲಕ ನೀರು ಪಡೆಯಲು ಮುಂದಾಗಿದ್ದೇವೆ. ಟ್ಯಾಂಕರ್ ನೀರು ಕೂಡ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ.

- ಶಾಲಿನಿ ಸುರೇಶ್, ಗೃಹಿಣಿ, ಶ್ರೀರಾಮ ಬಡಾವಣೆ

ವಿದ್ಯುತ್ ಸಮಸ್ಯೆ ಇರುವಾಗಲೇ ಹಲವು ದಿನ ನೀರು ಪೂರೈಕೆ ಮಾಡದಿದ್ದರೆ ಜನರು ಜೀವನ ಮಾಡುವುದು ಹೇಗೆ? ಜಲಮಂಡಳಿ ತನ್ನ ಸಮಸ್ಯೆ ಹೇಳುತ್ತದೆಯಾದರೂ, ಸ್ಪಷ್ಟ ಪರಿಹಾರ ಒದಗಿಸಲು ವಿಳಂಬ ಮಾಡುತ್ತಿದೆ. ಪೈಪ್‌ಲೇನ್‌ಗೆ ಹಾನಿಯಾಗಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಸಲಿ.

- ಜೈಶಂಕರ್, ಸ್ಥಳೀಯ ನಿವಾಸಿ, ಕೆಂಗೇರಿ ಉಪನಗರ

ಆ್ಯಕ್ಟ್ ಫೈಬರ್‌ನೆಟ್ ಕಂಪನಿ ಅನುಮತಿ ಇಲ್ಲದೆ ಕೇಬಲ್ ಅಳವಡಿಸುವ ವೇಳೆ ಮುಖ್ಯ ಕೊಳವೆಗೆ ಹಾನಿಯಾಗಿದೆ. ಘಟನೆಗೆ ಕಾರಣರಾದವರ ವಿರುದ್ಧ ಕೆಂಗೇರಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕೊಳವೆ ದುರಸ್ತಿಗೆ ಕ್ರಮ ವಹಿಸಿದ್ದು, ನೀರಿನ ಸಮಸ್ಯೆಗೆ ಒಳಗಾಗಿರುವ ಲೇಔಟ್‌ಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.

- ದೀಪಕ್, ಜಲಮಂಡಳಿ ಎಇಇ (ಪಶ್ಚಿಮ ವಿಭಾಗ), ಆರ್.ಆರ್.ನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net