

ಚನ್ನರಾಯಪಟ್ಟಣ: ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನಪರ ಆಡಳಿತದಿಂದ ಸಾಮಾಜಿಕ ನ್ಯಾಯದ ಹರಿಕಾರ ಎನ್ನಿಸಿಕೊಂಡರು ಎಂದು ಪುರಸಭಾಧ್ಯಕ್ಷ ಸಿ.ಎನ್. ಮೋಹನ್ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಬುಧವಾರ ತಾಲೂಕು ಆಡಳಿತ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ .ಡಿ.ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಸಮಾಜದಲ್ಲಿ ಸಮಾನತೆ ಸಾರಿ, ಶೋಷತರಿಗೆ ಶಕ್ತಿ ತುಂಬಿ ಮೇಲೆತ್ತಿದವರು ಅರಸು. ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅವರ ಕಾಲವನ್ನು ರಾಜ್ಯದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡುವಂತದ್ದಾಗಿದೆ. ಆರ್ಥಿಕ ಸದೃಢ ಕುಟುಂಬದಿಂದ ಬೆಳೆದು ಬಂದಿರುವ ದೇವರಾಜ ಅರಸು ಸ್ವತಃ ತಾನೇ ಶೋಷಣೆಗೆ ಒಳಗಾಗದಿದ್ದರೂ ಶೋಷಿತರ ಜೀವನವನ್ನು ಅರಿತು ಅವರ ಕಲ್ಪನೆಗೆ ಜೀವ ತುಂಬಿದವರು ಎಂದರು.
ಉಳುವವನಿಗೆ ಭೂಮಿ ನೀಡುವ ಯೋಜನೆಯ ಮೂಲಕ ಕೃಷಿ ಭೂಮಿಯನ್ನು ಬಡರೈತರಿಗೆ ನೀಡಿ ನ್ಯಾಯ ಒದಗಿಸಿದರು. ಸಮಾಜದಲ್ಲಿದ್ದ ಅಸಮಾನತೆ, ತಾರತಮ್ಯ ಹೋಗಲಾಡಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದರು. ಶಿಕ್ಷಣ ಮತ್ತು ಉದ್ಯೋಗಾವಕಾಶವನ್ನು ಹೆಚ್ಚಿಸಲು ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಎರಡು ಅವಧಿಗೆ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಪ್ರಗತಿ ಪಥದತ್ತ ಕೊಂಡೊಯ್ದರು. ಮೈಸೂರು ರಾಜ್ಯವನ್ನು 1973ರಲ್ಲಿ ಕರ್ನಾಟಕ ಎಂದು ನಾಮಕಾರಣ ಮಾಡಿದರು. ಹಿಂದುಳಿದ ವರ್ಗದ ಏಳಿಗೆಗೆ ಶ್ರಮಿಸಿದ ಧೀಮಂತ ನಾಯಕ ಎಂದು ಬಣ್ಣಿಸಿದರು.
ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪುರಸಭೆಯ ಉಪಾಧ್ಯಕ್ಷೆ ಕವಿತಾ ರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎ. ಗಣೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ರಾಜೇಶ್ ಚೌಹಾಣ್, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಅನಂತ್ ಭಾಗವಹಿಸಿದ್ದರು.