

ಬೆಂ. ಗ್ರಾಮಾಂತರ: ಕರೊನಾ ಲಾಕ್‌ಡೌನ್ ಸಡಿಲಿಕೆ ಬಳಿಕ ಗ್ರಾಮಾಂತರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆ ಗರಿಗೆದರಿದ್ದು, ಪ್ರೇಕ್ಷಣಿಯ ಸ್ಥಳಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಇದರ ನಡುವೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗಿದೆ.
ಜಿಲ್ಲೆಯ ಪ್ರಮುಖ ನಾಲ್ಕು ಪ್ರವಾಸಿ ತಾಣಗಳಲ್ಲಿ ಇಲಾಖೆ ಶ್ರಮದಾನದ ಮೂಲಕ ಸ್ವಚ್ಛತೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಘಾಟಿಸುಬ್ರಹ್ಮಣ್ಯ, ದೇವನಹಳ್ಳಿ ಕೋಟೆ, ಮಧುರೆ ದೇವಸ್ಥಾನ ಹಾಗೂ ಶಿವಗಂಗೆ ಕ್ಷೇತ್ರದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಸಿಬ್ಬಂದಿ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಸೆಳೆಯುವ ಜತೆಗೆ ಕರೊನಾ ಮುಂಜಾಗ್ರತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಜಾಗೃತಿ ಜಾಥಾ ಹಮ್ಮಿಕೊಂಡಿತ್ತು. ಪರಸ್ಪರ ಅಂತರ ಕಾಯ್ದುಕೊಳ್ಳಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ ಹಾಗೂ ಅಗತ್ಯವಿದ್ದ ವೇಳೆ ಸ್ಯಾನಿಟೈಸರ್ ಬಳಸುವಂತೆ ಬ್ಯಾನರ್‌ಗಳ ಮೂಲಕ ಅರಿವು ಮೂಡಿಸಲಾಯಿತು.
ದೇಗುಲ ಸಿಬ್ಬಂದಿ ಭಾಗಿ: ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ದೇವಸ್ಥಾನದ ಸಿಬ್ಬಂದಿ ಹಾಗೂ ಪ್ರವಾಸಿ ಮಿತ್ರ ಸಿಬ್ಬಂದಿ ಸಹಯೋದಲ್ಲಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಶ್ರೀ ಕ್ಷೇತ್ರದ ಸ್ಥಳೀಯರನ್ನು ಒಳಗೊಂಡಂತೆ ಪ್ರವಾಸಿಗರಿಗೆ ಸ್ವಚ್ಛತೆ ಅರಿವು ಮೂಡಿಸಲಾಯಿತು.
ಗುಲಾಬಿ ಸ್ವಾಗತ: ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ವಿದೇಶಿಯರಿಗೆ ಗುಲಾಬಿ ಹೂವು ನೀಡಿ ಸ್ವಾಗತಿಸುವ ಪರಿವಾಠ ಇಟ್ಟುಕೊಂಡಿರುವ ಪ್ರವಾಸೋದ್ಯಮ ಇಲಾಖೆ ಈ ಬಾರಿ ಸ್ಥಳೀಯ ಪ್ರವಾಸಿಗರಿಗೂ ಗುಲಾಬಿ ಹೂವು ನೀಡಿ ಸ್ವಾಗತ ಕೋರಿದ್ದು ವಿಶೇಷವಾಗಿತ್ತು. ಕರೊನಾ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಿಗೆ ವಿದೇಶಿಯರ ಭೇಟಿ ನಿಂತು ಹೋಗಿದೆ. ಸ್ಥಳೀಯವಾಗಿಯೇ ಪ್ರವಾಸಿಗರನ್ನು ಸೆಳೆಯಲು ಇಲಾಖೆ ಸಾಕಷ್ಟು ಕಸರತ್ತು ನಡೆಸುತ್ತಿದೆ.
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆ ಚೇತರಿಕೆ ಹಾದಿಯತ್ತ ಸಾಗಿವೆ, ಈಗಾಗಲೇ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣದ ಚಿಂತನೆ ಇದೆ. ಮತ್ತಷ್ಟು ಕಾರ್ಯಕ್ರಮಗಳು ಶೀಘ್ರವೇ ಜಾರಿಯಾಗಲಿವೆ. ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಪ್ರೇಕ್ಷಣಿಯ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಪ್ರವಾಸಿಗರು ಸುರಕ್ಷಿತವಾಗಿ ಪ್ರವಾಸ ಕೈಗೊಳ್ಳುವಂತೆ ಮನವಿ ಮಾಡಲಾಯಿತು. ಮುಖ್ಯವಾಗಿ ಕರೊನಾ ನಿಯಮ ಪಾಲನೆ ಬಗ್ಗೆ ಅರಿವು ಮೂಡಿಸಲಾಯಿತು. ಮಂಗಳಗೌರಿ, ಸಹಾಯಕ ನಿರ್ದೇಶಕಿ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ