29ಕ್ಕೆ ಐತಿಹಾಸಿಕ ಕಟ್ಟಡಗಳಿಗೆ ಗುಲಾಬಿ ವಿದ್ಯುತ್ ಅಲಂಕಾರ

ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು 29 ಮತ್ತು 30 ರಂದು ಐತಿಹಾಸಿಕ ಕಟ್ಟಡಗಳಿಗೆ ಗುಲಾಬಿ (ಪಿಂಕ್ ಡೇ) ಬಣ್ಣದ ವಿದ್ಯುತ್ ಅಲಂಕಾರ ಸೇರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ. ಭಗವಾನ್ ತಿಳಿಸಿದ್ದಾರೆ.
Pink Light press meet
ನಗರದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕುಲಪತಿ ಡಾ.ಬಿ.ಸಿ. ಭಗವಾನ್ ಮಾತನಾಡಿದರು. ಮೌಲ್ಯಮಾಪನ ರಿಜಿಸ್ಟ್ರಾರ್ ಡಾ.ಸಂದೀಪ್ ಇದ್ದರು.folder
Published on: 

ಬೆಂಗಳೂರು: ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು 29 ಮತ್ತು 30 ರಂದು ಐತಿಹಾಸಿಕ ಕಟ್ಟಡಗಳಿಗೆ ಗುಲಾಬಿ (ಪಿಂಕ್ ಡೇ) ಬಣ್ಣದ ವಿದ್ಯುತ್ ಅಲಂಕಾರ ಸೇರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ. ಭಗವಾನ್ ತಿಳಿಸಿದ್ದಾರೆ.

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಹಾಗೂ ಇತರ ಪ್ರಮುಖ ಕ್ಯಾನ್ಸರ್ ಚಿಕಿತ್ಸಾ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳಲ್ಲಿ ಈ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ವಿಧಾನಸೌಧ, ಪುರಭವನ, ಕಬ್ಬನ್ ಪಾರ್ಕ್‌ನಲ್ಲಿನ ಸರ್ ಶೇಷಾದ್ರಿ ಸ್ಮಾರಕ ಗ್ರಂಥಾಲಯ, ವಸ್ತುಸಂಗ್ರಹಾಲಯ, ವಿವಿ ವ್ಯಾಪ್ತಿಯಲ್ಲಿನ ಮಹಾವಿದ್ಯಾಲಯ, ಜಿಲ್ಲಾ ಕೇಂದ್ರಗಳಲ್ಲಿರುವ ಸರ್ಕಾರಿ ಕಟ್ಟಡಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕ್ಯಾನ್ಸರ್‌ಗೆ ಆರಂಭಿಕ ಹಂತದಲ್ಲೇ ತಪಾಸಣೆಗೆ ಒಳಗಾಗುವ ಮೂಲಕ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು. 40 ವರ್ಷ ಮೇಲ್ಪಟ್ಟ ಮಹಿಳೆಯರು ಕಡ್ಡಾಯವಾಗಿ ತಪಾಸಣೆ ಮಾಡಿಕೊಳ್ಳುವುದು ಒಳ್ಳೆಯದು. ಆಗ ಕಾಯಿಲೆ ಇರುವುದು ಪತ್ತೆಯಾದರೆ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಲಕ್ಷಣಗಳು ಕಾಣಿಸಿಕೊಂಡು 2- 3ನೇ ಹಂತ ತಲುಪಿದ ನಂತರ ಚಿಕಿತ್ಸೆಗೆ ಮುಂದಾದಾಗ ಗುಣವಾಗುವ ಸಾಧ್ಯತೆಗಳು ಕಡಿಮೆ ಎಂದರು.

ವೈದ್ಯಕೀಯ ಸಾಹಿತ್ಯ ಸಮ್ಮೇಳನ

ವಿವಿ ವತಿಯಿಂದ ಸಮಗ್ರ ಕನ್ನಡ ವೈದ್ಯಕೀಯ ಸಾಹಿತ್ಯ ಸಮ್ಮೇಳವನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಶೀಘ್ರದಲ್ಲೇ ಅದರ ದಿನಾಂಕ ಪ್ರಕಟಿಸಲಾಗುವುದು. ಉಳಿದಂತೆ, ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 10 ಮಂದಿ ಅತ್ಯುತ್ತಮ ಪ್ರಾಧ್ಯಾಪಕರನ್ನು ಆಯ್ಕೆ ಮಾಡಿದ್ದು, 31ರಂದು ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಕುಲಪತಿ ಡಾ.ಬಿ.ಸಿ. ಭಗವಾನ್ ತಿಳಿಸಿದ್ದಾರೆ.

ದೇಶದಲ್ಲೇ ಬೆಂಗಳೂರು ದ್ವಿತೀಯ

ವಿಶ್ವ ಆರೋಗ್ಯ ಸಂಸ್ಥೆಯ ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆಯ ವರದಿ ಪ್ರಕಾರ, 2020ರಲ್ಲಿ 1.93 ಕೋಟಿ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿದ್ದು, 1 ಕೋಟಿ ಮಂದಿ ಮೃತಪಟ್ಟಿದ್ದಾರೆ. ಜಾಗತಿಕ ಮಟ್ಟದಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಸ್ತನ ಕ್ಯಾನ್ಸರ್ ಸಹ ಪ್ರಮುಖವಾಗಿದೆ. ವಾರ್ಷಿಕವಾಗಿ ದೇಶದಲ್ಲಿ 23 ಲಕ್ಷ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಬೆಂಗಳೂರು ದ್ವಿತೀಯ ಸ್ಥಾನದಲ್ಲಿದೆ, ರಾಜ್ಯದಲ್ಲಿ 15 ಸಾವಿರ ಪ್ರಕರಣಗಳು ಪತ್ತೆಯಾಗಿವೆ ಎಂದು ತಜ್ಞವೈದ್ಯ ಡಾ.ವಿಷ್ಣು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net