

ಗೌರಿಬಿದನೂರು: ನಗರದಿಂದ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಮಾರ್ಗದಲ್ಲಿರುವ ಉತ್ತರ ಪಿನಾಕಿನಿ ನದಿ ಸೇತುವೆ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣದ ಯೋಜನೆ ರೂಪಿಸಿದ್ದು, ಹಾಲಿ ಇರುವ 8 ಮೀ. ಸೇತುವೆ ತೆರವುಗೊಳಿಸಿ, 16 ಮೀ. ಸೇತುವೆ ನಿರ್ಮಿಸಲಾಗುವುದು. ಮಳೆಗಾಲದಲ್ಲಿ ಸ್ಥಗಿತಗೊಂಡಿದ್ದ ಹಳೇ ಸೇತುವೆ ತೆರವು ಕಾರ್ಯಾಚರಣೆಯನ್ನು ಪುನಹ ಪ್ರಾರಂಭಿಸಲಾಗಿದೆ. ಈ ಹಿನ್ನಲೆಯಲ್ಲಿ ಭಾರಿ ವಾಹನಗಳಿಗೆ ಸೇತುವೆ ಮಾರ್ಗದಲ್ಲಿ ಸಂಚಾರ ವ್ಯವಸ್ಥೆ ನಿರ್ಬಂಧಿಸಲಾಗಿದೆ. ತಾತ್ಕಾಲಿಕವಾಗಿ ದ್ವಿಚಕ್ರ, ಆಟೋರಿಕ್ಷಾದಂತಹ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಭಾರಿ ವಾಹನಗಳಿಗೆ ಬೈಪಾಸ್ ರಸ್ತೆಯಲ್ಲಿ ಬದಲಿ ವ್ಯವಸ್ಥೆ ಮಾಡಲಾಗಿದೆ. 6 ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಬದಲಿ ಮಾರ್ಗದಲ್ಲಿ ಸಂಚರಿಸುವ ಮೂಲಕ ಸಾರ್ವಜನಿಕರು ಸಹಕರಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೋರಿದ್ದಾರೆ.