ಪಿಲಿಕುಳ ಮಾಂಸ ದಂಧೆ!, 3 ಕೋ.ರು ಮೊತ್ತದ ಮಾಂಸ ಆಹಾರ ಪೂರೈಕೆಯ ಕಡತಕ್ಕೆ ದಿಢೀರ್ ಸಹಿ, ಕಡತದಲ್ಲಿ ದಿನಕ್ಕೆ 500 ಕೆ.ಜಿ ಮಾಂಸ-ಆದರೂ ಪ್ರಾಣಿಗಳು ಹಸಿವಿನಲ್ಲಿ ಕಂಗಾಲು

pilikula
Published on

ಶ್ರವಣ್‌ಕುಮಾರ್ ನಾಳ, ಮಂಗಳೂರು

ರಾಜ್ಯದ ಪ್ರತಿಷ್ಠಿತ ಮೃಗಾಲಯ ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದ ಅಧೀನದ ಮೃಗಾಲಯಕ್ಕೆ ದಿನಕ್ಕೆ 500ಕೆ.ಜಿ ಮಾಂಸ ಪೂರೈಕೆಯ ವಾರ್ಷಿಕ 3 ಕೋ.ರು ಮೊತ್ತದ ಪ್ರಾಣಿಗಳ ಮಾಂಸ ಆಹಾರ ಪೂರೈಕೆಯ ಕಡತಕ್ಕೆ ದಿಢೀರ್ ಸಹಿ ಬಿದ್ದಿದೆ.

ಕಳೆದ ಒಂದು ದಶಕದಿಂದ ಪಿಲಿಕುಳ ಮೃಗಾಲಯದ ಪ್ರಾಣಿಗಳಿಗೆ ಮಾಂಸ ಆಹಾರ ಪೂರೈಕೆ ಬಗ್ಗೆ ಅಪಸ್ವರ ಎದ್ದಿತ್ತು. ಮಂಗಳೂರು ಬಿಜೈ ಮೂಲದ ವ್ಯಕ್ತಿಯೋರ್ವರು ಮಾಂಸ ಆಹಾರ ಪೂರೈಕೆಯ ಗುತ್ತಿಗೆ ಪಡೆದಿದ್ದರು. ಪ್ರಾಣಿಗಳಿಗೆ ವಾರ್ಷಿಕವಾಗಿ ಕೋಟ್ಯಾತರ ರೂ. ವೆಚ್ಚದಲ್ಲಿ ಮಾಂಸ ಪೂರೈಸುವ ಬಗ್ಗೆ ಕಡತದಲ್ಲಿ ದಾಖಲೆಯಿದ್ದರೂ, ಪ್ರತಿನಿತ್ಯ ಈ ಮಾಂಸ ಪೂರೈಕೆಯಾಗುತ್ತಿಲ್ಲ ಎಂಬ ಆರೋಪ ಎದುರಾಗಿತ್ತು. ಈ ಹಿಂದೆ ಪಿಲಿಕುಳ ಅಭಿವೃದ್ದಿ ಪ್ರಧಿಕಾರದ ಆಯುಕ್ತರಾಗಿ ಪ್ರಭಾರ ನೆಲೆಯಲ್ಲಿ ಕಾರ್ಯನಿರ್ವಹಿಸಿದ್ದ ರಶ್ಮಿ ಅವರು ಪ್ರಾಣಿಗಳಿಗೆ ವಾರ್ಷಿಕ 3 ಕೋ.ರು ಮೊತ್ತದ ಮಾಂಸ ಅಗತ್ಯ ಇದೆಯೆ ಎಂಬುವುದರ ಬಗ್ಗೆ ಪರಿಶೀಲನೆಗೊಳಪಡಿಸಲು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಗೆ ಸೂಚಿಸಿ ಕಡತಕ್ಕೆ ಸಹಿಹಾಕದ ಇಟ್ಟಿದ್ದರು.

*ಕಡತದಲ್ಲಿ ದಿನಕ್ಕೆ 500 ಕೆ.ಜಿ ಮಾಂಸ

ಪಿಲಿಕುಳ ಬಯೋಲಾಜಿಕಲ್ ಪಾರ್ಕ್‌ನಲ್ಲಿ ಈಗ 11ಹುಲಿ, 1 ಬಿಳಿ ಹುಲಿ, 2 ಕರಡಿ, 48 ಕೃಷ್ಣ ಮೃಗ, 4 ಖಡ್ಗಮೃಗ, 6 ಹೈನಾ, 2 ಸಿಂಹ, 4 ರಿಯಾ ಪಕ್ಷಿ, 4 ನವಿಲು, 4 ಬಿಳಿ ನವಿಲು, 32 ಕಾಳಿಂಗ ಸರ್ಪ, 23 ರಿಟಿಕ್ಯುಲೇಟೆಡ್ ಪೈಥಾನ್, 26 ಮೊಸಳೆ, 3 ಇಗ್ವಾನ, 3 ಉಷ್ಟ್ರಪಕ್ಷಿ, ನೀರುನಾಯಿ, ಕಡವೆ, ಜಿಂಕೆ, ಮುಂಗುಸಿ....ಹೀಗೆ ಇನ್ನೂ ಅನೇಕ ಪ್ರಾಣಿ-ಪಕ್ಷಿಗಳಿವೆ. ಇದರಲ್ಲಿ ಮಾಂಸಾಹಾರ ಪ್ರಾಣಿಗಳು ಬೆರಳೆನಿಕೆಯಷ್ಟು ಮಾತ್ರ. ಇದರಲ್ಲಿ ಶೇ.30ರಷ್ಟು ಪ್ರಾಣಿಗಳನ್ನು ಈಗಾಗಲೇ ಹಲವರು ದತ್ತು ಪಡೆದಿದ್ದಾರೆ. ಪಿಲಿಕುಳದ ಅಧಿಕಾರಿಗಳ ಮಾಹಿತಿಯಂತೆ ದಿವೊಂದಕ್ಕೆ 500 ಕೆ.ಜಿ ಮಾಂಸ ಬೇಕಂತೆ!.. ಆದರೆ ಈ ಪ್ರಾಣಿಗಳು ಮಾತ್ರ ಆಹಾರ ತಿನ್ನದೆ ವಾರವಾಗಿರುವಂತೆ ಕಣುತ್ತಿದೆ.

*ಸಸ್ಯಾಹಾರಿ ಪ್ರಾಣಿಗಳಿಗೆ ಸಸ್ಯಾಹಾರಿ ತ್ಯಾಜ್ಯ

ಪಿಲಿಕುಳ ಮೃಗಾಲಯದಲ್ಲಿ ಮಾಂಸ ಆಹಾರ ಪೂರೈಕೆಯಲ್ಲಿ ದಂಧೆ ನಡೆಯುತ್ತಿರುವುದು ಒಂದೆಡೆಯಾದರೆ ಸಸ್ಯಾಹಾರಿ ಪ್ರಾಣಿಗಳಿಗೆ ಮಂಗಳೂರು ಸೆಂಟ್ರಲ್ ಮಾರ್ಕೇಟ್‌ನಿಂದ ಬೆಳ್ಳಂಬೆಳಗ್ಗೆ ಸಸ್ಯಾಹಾರಿ ತ್ಯಾಜ್ಯಗಳನ್ನು ಸರಬರಾಜು ಮಾಡಲಾಗುತ್ತದೆ. ಪ್ರಾಣಿಗಳ ಸಸ್ಯಾಹಾರ, ತರಕಾರಿ ಪೂರೈಕೆಗೂ ಕೋಟ್ಯಾಂತರ ರೂ. ಬಿಲ್ ಮಾಡಿರುವುದು ಪಿಲಿಕುಳದ ದಾಖಲೆಯಲ್ಲಿದೆ. ಕೊಳೆತ ಹಾಗೂ ಕನಿಷ್ಟಗುಣಮಟ್ಟದ ಟೊಮೆಟೊ, ಸೌತೆ ಪೂರೈಕೆಯಾಗುತ್ತದೆ. ಮಾರ್ಕೇಟ್ ಬದಿಯಲ್ಲಿ ರಾಶಿಬಿದ್ದ ಕ್ಯಾಬೀಜ್ ವೇಸ್ಟ್‌ಗಳನ್ನು ಜಿಂಕೆಗಳ ಬೋನ್ ಮುಂದೆ ರಾಶಿಹಾಕಿರುವುದನ್ನು ಪ್ರತಿನಿತ್ಯ ಕಾಣಬಹುದು.

---------------

ಮಾಂಸದ ಕಡತಕ್ಕೆ ದಿಢೀರ್ ಸಹಿ

ವಾರದ ಹಿಂದೆ ಪಿಲಿಕುಳ ಅಭಿವೃದ್ದಿ ಪ್ರಾಧಿಕಾರದ ಆಯುಕ್ತರಾಗಿ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರು ಪ್ರಭಾರ ನೆಲೆಯಲ್ಲಿ ನಿಯೋಜನೆಗೊಂಡಿದ್ದಾರೆ. ಈ ವೇಳೆ 3 ಕೋ.ರು ಮೊತ್ತದ ಮಾಂಸ ಆಹಾರ ಪೂರೈಕೆಯ ಕಡತಕ್ಕೆ ದಿಢೀರ್ ಸಹಿ ಬಿದ್ದಿದೆ. ಮೃಗಾಲಯದ ಮಾಹಿತಿಯಂತೆ ಮಾಂಸಾಹಾರಿ ಪ್ರಾಣಿಗಳಿಗೆ ಪ್ರತಿನಿತ್ಯ 85 ಸಾವಿರ ರೂ.ಮೊತ್ತದ ಸುಮಾರು 500ಕೆಜಿ ಮಾಂಸ ಅಗತ್ಯ. ಆದರೆ ವಿಜಯವಾಣಿಗೆ ಲಭ್ಯ ಮಾಹಿತಿಯಂತೆ ಪ್ರತೀ ದಿನ 100ಕೆಜಿ ಮಾಂಸ ಪೂರೈಕೆಯಾಗುವುದು ಹೆಚ್ಚು. ಕೆಲವು ಪ್ರಾಣಿಗಳಿಗೆ 2-3 ದಿನಗಳಿಗೊಮ್ಮೆ ಆಹಾರ ನೀಡಲಾಗುತ್ತದೆ ಎಂಬ ಆರೋಪ ಇದೆ. ಬಹುತೇಕ ಪ್ರಾಣಿಗಳು ನಿತ್ರಾಣದಿಂದ ಬಳಲಿದ ಸ್ಥಿತಿಯಲ್ಲಿದ್ದು, ಮೃಗಾಲಯಕ್ಕೆ ಆಗಮಿಸುವ ಪ್ರವಾಸಿರನ್ನು ನೋಡಿ ಆಹಾರಕ್ಕಾಗಿ ಅಂಗಲಾಚುತ್ತಿರುವ ದಯನೀಯ ಸ್ಥಿತಿ ಕಾಣಬಹುದು. ಕಳೆದ ವರ್ಷ ಹಿಸಿವಿನಿಂದ ಚಿರತೆಯೊಂದು ಬೇಲಿಹಾರಿ ಹೆಮು ಪಕ್ಷಿಯನ್ನು ಕೊಂದು ಪರಾರಿಯಾಗಿತ್ತು.

----------------

ಪ್ರಾಣಿಗಳ ಆಹಾರದಲ್ಲಿ ಅವ್ಯವಹಾರ

ಕಳೆದ 10-15 ವರ್ಷಗಳಿಂದ ಪಿಲುಕುಳದ ಪ್ರಾಣಿಗಳಿಗೆ ಒಬ್ಬನೇ ಮಾಂಸ ಪೂರೈಕೆ ಮಾಡುತ್ತಿದ್ದು, ಈಬಗ್ಗೆ ಕೋಟ್ಯಾಂತರ ರೂ. ಅವ್ಯವಹಾರ ನಡೆದಿದೆ ಎಂದು ಮೂಡಬಿದರೆ ಶಾಸಕ ಉಮಾನಥ ಕೋಟ್ಯಾನ್ ವಿಜಯವಾಣಿಗೆ ತಿಳಿಸಿದ್ದಾರೆ. ಇಲ್ಲಿ ಪ್ರಾಣಿಗಳಿಗೆ ಅಗತ್ಯವಿರುವ ಮಾಂಸಹಾರಕ್ಕಿಂತ ಜಾಸ್ತಿ ಮೊತ್ತವನ್ನು ದಾಖಲೆಯಲ್ಲಿ ತೋರಿಸಲಾಗುತ್ತಿದೆ. ಮಾಂಸಾಹಾರ ಪ್ರಾಣಿಗಳಿಗೆ ದಾಖಲೆಯ ಅರ್ಧದಷ್ಟೂ ಮಾಂಸ ನೀಡುತ್ತಿಲ್ಲ. ಈ ಅವ್ಯವಹಾರದಲ್ಲಿ ಅಧಿಕಾರಿಗಳು ನೇರವಾಗಿ ಭಾಗಿಯಾಗಿದ್ದಾರೆ ಎಂಬುವುದಾಗಿ ಜಿಲ್ಲಾಧಿಕಾರಿಗಳಲ್ಲಿ ಹಲವು ಬಾರಿ ತಿಳಿಸಿದ್ದೇನೆ. ಇತ್ತೀಚಿನ ಕೆಲವು ಸಮಯದಿಂದ ಪಿಲಿಕುಳದ ಯಾವುದೇ ಸಭೆ, ನಿರ್ಣಯಗಳಿಗೆ ಶಾಸಕನಾಗಿ ನನಗೆ ಪಿಲಿಕುಳದ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ. ಪಿಲಿಕುಳದಲ್ಲಿ ಬಗೆದಷ್ಟು ಅವ್ಯವಹಾರಗಳು ಸಾಕಷ್ಟಿದೆ ಎಂದು ತಿಳಿಸಿದ್ದಾರೆ.

-----------------

ಪಿಲಿಕುಳದಲ್ಲಿ ಪ್ರಾಣಿಗಳ ಮಾಂಸ ಆಹಾರ ಪೂರೈಕೆಯೇ ಒಂದು ಅವ್ಯವಹಾರ. ಕಳೆದ ಹಲವಾರು ವರ್ಷದಿಂದ ಒಬ್ಬನೇ ಮಾಂಸ ಪೂರೈಕೆಯ ಗುತ್ತಿಗೆ ಪಡೆದು ಸಮರ್ಪಕ ಪೂರೈಕೆ ಮಾಡದೆ ಪ್ರಾಣಿಗಳು ಹಸಿವಿನಲ್ಲಿ ಕಂಗಾಲಾಗುವ ಸ್ಥಿತಿಯಲ್ಲಿದೆ. ಅಧಿಕಾರಿಗಳ ಕೃಪೆಯಿಂದ ಮಾಂಸ ಪೂರೈಕೆಯಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ನಡೆಯುತ್ತಿದೆ.

-ಉಮಾನಾಥ ಕೋಟ್ಯಾನ್, ಮೂಡಬಿದ್ರೆ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net